ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರ ಬಡ, ಮಧ್ಯಮ ವರ್ಗದವರ ರಕ್ತ ಹೀರುತ್ತಿದೆ: ಸಿದ್ದರಾಮಯ್ಯ - ಸಿದ್ದರಾಮಯ್ಯ ವಾಗ್ದಾಳಿ

ಜಿಎಸ್‌ಟಿ ಹೆಚ್ಚಳದಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ- ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ- ಬಡ, ಮಧ್ಯಮ ವರ್ಗದವರ ರಕ್ತ ಹೀರುವ ಸರ್ಕಾರ ಎಂದು ವಾಗ್ದಾಳಿ

Siddaramaiah press conference
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

By

Published : Jul 18, 2022, 2:23 PM IST

ಬೆಂಗಳೂರು: ಕೇಂದ್ರ ಸರ್ಕಾರದ ಜಿಎಸ್‌ಟಿ ಹೆಚ್ಚಳ ಮಾಡಿರುವುದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕನಿಷ್ಠ 8 ಲಕ್ಷ ಕೋಟಿ ರೂ. ಮೊತ್ತ ನಮಗೆ ಬರಬೇಕು. ಶೇ.42 ರಷ್ಟು ನಿಯಮ ಬದ್ಧ ಅನುದಾನ ಬರಬೇಕಿತ್ತು, ಆದರೆ ಬಂದಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವಾ ಏರಿಕೆ ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂಧನ, ಅಡುಗೆ ಅನಿಲ ಬೆಲೆ, ಕಬ್ಬಿಣ, ಸಿಮೆಂಟ್, ಗೊಬ್ಬರ ಬೆಲೆ ಏರಿಕೆಯಾಗಿದೆ. ಇಂದಿನಿಂದ ಜಿಎಸ್​ಟಿ ಹೆಚ್ಚಳ ಆಗಿದೆ. ಜಿಎಸ್​ಟಿ ಕೌನ್ಸಿಲ್​​ನಲ್ಲಿ ಹೆಚ್ಚಳ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ಒಬ್ಬ ಸದಸ್ಯರು. ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್​​ ಮೇಲೆ ಉಚಿತ ತೆರಿಗೆ ಶೇ.5ರಷ್ಟು ಹೆಚ್ಚಾಗಿದೆ. ಅಕ್ಕಿ, ಬಾರ್ಲಿ, ಬೆಲ್ಲ, ಜೇನುತುಪ್ಪ ಮೇಲೆ ತೆರಿಗೆ ಹೆಚ್ಚಿಸಲಾಗಿದೆ.

ಕೆಲ ಉತ್ಪನ್ನಗಳಿಗೆ ಜಿಎಸ್​ಟಿ ಶೇ.5 ರಿಂದ ಶೇ.12ಕ್ಕೆ ಹೆಚ್ಚಿಸಲಾಗಿದೆ. ಶೇ.12 ಇದ್ದದ್ದು ಶೇ. 18 ಆಗಿದೆ. ಹಣ್ಣು, ತರಕಾರಿ ಶೇ.5 ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ರೈತರ ಪಂಪ್ ಸೆಟ್‌ಗೆ ಶೇ.18 ರಷ್ಟು ಜಿಎಸ್​ಟಿ ಹೆಚ್ಚಿಸಲಾಗಿದೆ. ಮಕ್ಕಳು ಬಳಸುವ ಮ್ಯಾಪ್ ಇತರ ಪಠ್ಯ ಸಾಧನಗಳ ಮೇಲೆ ಶೇ. 0 ಯಿಂದ ಶೇ. 12ಕ್ಕೆ ಹೆಚ್ಚಿಸಲಾಗಿದೆ. ಇದು ಮೋದಿ ಸರ್ಕಾರದ ಅಚ್ಛೇ ದಿನ್ ಪರಿಣಾಮ. ಬಡವರು, ಮಧ್ಯಮ ವರ್ಗದವರು ಬಳಸುವ ವಸ್ತುವನ್ನೇ ಗುರುತಿಸಿ ಜಿಎಸ್​ಟಿ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈಗ ಜಿಎಸ್​ಟಿ ಹೆಚ್ಚಿಸಿದರೆ ಜನ‌ ಬದುಕುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಬಡವರ, ಮಧ್ಯಮ ವರ್ಗದವರ ರಕ್ತ ಹೀರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಗಳು ಇದಕ್ಕೆ ಸಹಕಾರ ನೀಡುತ್ತಿವೆ. ರೈತರಿಗೆ ಗೊಬ್ಬರ ಕೊಡುವ ಶಕ್ತಿ ಸರ್ಕಾರಕ್ಕೆ ಇಲ್ಲವಾಗಿದೆ. ಇದು ಮೋದಿ 8 ವರ್ಷ, ಬೊಮ್ಮಾಯಿ 1 ವರ್ಷದ ಸಾಧನೆಯಾಗಿದೆ.

ಇದನ್ನೂ ಓದಿ:ಜಿಎಸ್‌ಟಿ ಏರಿಕೆಗೆ ವಿರೋಧ: ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್​ನಿಂದ ಪ್ರತಿಭಟನೆ

ಅಧಿಕಾರ ದುರುಪಯೋಗ:ಪ್ಯಾಕಿಂಗ್ ಮೇಲೆ ಜಿಎಸ್​ಟಿ ಹಾಕಿದರೆ ಉತ್ಪಾದಕರು, ಗ್ರಾಹಕರಿಗೆ ಹೊಡೆತ ಬೀಳಲಿದೆ. ಸಣ್ಣ ಕೈಗಾರಿಕೆ ಮೇಲೆ ಹೊಡೆತ ಬೀಳಲಿದೆ. ಕೋವಿಡ್, ನೋಟು ಅಮಾನ್ಯ ಪರಿಣಾಮ 10 ಕೋಟಿ ಉದ್ಯೋಗ ನಷ್ಟವಾಗಿದೆ. ಶೇ.60 ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿವೆ. 35 ಸಾವಿರ ಸರ್ಕಾರಿ ಹುದ್ದೆಗೆ 1 ಕೋಟಿ 26 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಒಂದು ಹುದ್ದೆಗೆ 130 ಮಂದಿ ಅರ್ಜಿ ಹಾಕಿದ್ದರು. ಈಗಾಗಲೇ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಆಗಬೇಕು ಎನ್ನುತ್ತಾರೆ. ಈ ರೀತಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ.

ಜನರಿಗೆ ದುಡ್ಡು ಸಿಗದೇ ಹೋದರೆ ಜಿಡಿಪಿ ಬೆಳೆಯಲ್ಲ. ಜನರ ಸಂಪಾದನೆ ಶಕ್ತಿ ಕುಂದಿದೆ. 5 ಟ್ರಿಲಿಯನ್ ಡಾಲರ್ಸ್ ಎಕಾನಮಿ ಮಾಡ್ತೇವೆ ಎನ್ನುತ್ತಾರೆ. ಅದು ಆಗಿದೆಯಾ? ಜನರಿಗೆ ಹೇಗೆ ಇವರು ಮೋಸ ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಇದೆ ಅಂತಾ ಜಗಜ್ಜಾಹಿರ ಆಗಿದೆ. ಆದರೆ ಮೋದಿ 'ನಾ ಖಾವುಂಗಾ, ನಾ ಖಾನೆ‌ದೂಂಗಾ' ಎನ್ನುತ್ತಾರೆ.

ಕೆಂಪಣ್ಣ ನೇರವಾಗಿ ಪತ್ರ ಬರೆದಿದ್ದರು. ಸಂತೋಷ್​​ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ. ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇವರು ದಾಖಲೆ ಕೊಡಿ ಅಂತಾರೆ. ಹೆಚ್ಚು ಹೇಳಿದರೆ, ಅವರ ಸರ್ಕಾರದಲ್ಲಿ ಅಕ್ರಮ ಆಗಿರಲಿಲ್ಲವೋ ಅಂತಾರೆ. ನಾವು ನ್ಯಾಯಾಂಗ ತನಿಖೆ ಎದುರಿಸಲು ಸಿದ್ಧ. ಅನಗತ್ಯ ಪ್ರತಿಪಾದನೆ ಬೇಡ ಎಂದರು.

ಜನರ ದಾರಿ ತಪ್ಪಿಸುವ ಕಾರ್ಯ: ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.80 ರಷ್ಟು ಭರವಸೆಯನ್ನು ಈಡೇರಿಸಿಲ್ಲ. ಈ ಮಧ್ಯೆ ಅಕ್ರಮಗಳು ಬೇರೆ. ಪಿಎಸ್ಐ ನೇಮಕಾತಿ ಅಕ್ರಮ ಸರ್ಕಾರದ ತಲೆ ತಗ್ಗಿಸುವಂತೆ ಮಾಡಿದೆ. ಅರಗ ಜ್ಞಾನೇಂದ್ರ‌ ಸದನದಲ್ಲಿ ಸರ್ಕಾರವನ್ನು ಪ್ರತಿಪಾದಿಸಿಕೊಂಡಿದ್ದರು. ಈಗ ಏನು ಹೇಳುತ್ತಾರೆ. 40% ಅಕ್ರಮಕ್ಕೆ ದಾಖಲಾತಿ ಕೊಡಿ ಅನ್ನುವವರು ತನಿಖೆ ಮಾಡಿ ಅಂತಾರೆ. ಉದ್ದೇಶ ಪೂರ್ವಕವಾಗಿ ಜನರ ದಾರಿ ತಪ್ಪಿಸುವ ಕಾರ್ಯ ಆಗುತ್ತಿದೆ.

ರಾಜ್ಯಕ್ಕೆ ಅನ್ಯಾಯ:ಎಲ್ಲಾ ಬಿಜೆಪಿಯೇತರ ಸರ್ಕಾರಗಳು ಜಿಎಸ್​ಟಿ ಕೌನ್ಸಿಲ್​​ನಲ್ಲಿ ತಕರಾರು ತೆಗೆದಿದ್ದವು. ಆದರೆ ಬೆಲೆ ಸಿಕ್ಕಿಲ್ಲ. ಸೆಸ್​​ನಲ್ಲಿ ಪಾಲಿಲ್ಲ. ತೆರಿಗೆಯಲ್ಲಿ ಪಾಲು. ಕೇಂದ್ರದವರು ಬಹುತೇಕ ವಸ್ತುವಿಗೆ ಸೆಸ್ ಹಾಕಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ಆಯ್ಕೆಯಾಗಿ ಇಲ್ಲಿಗೆ ಅನ್ಯಾಯ ಮಾಡಿದ್ದಾರೆ. ಪಂಚವಾರ್ಷಿಕ ಯೋಜನೆಯಲ್ಲಿ ಒಂದರಿಂದ ಇನ್ನೊಂದಕ್ಕೆ ರಾಜ್ಯಕ್ಕೆ ಸಿಗುವ ಅನುದಾನ ಕಡಿಮೆ ಆಗುತ್ತಲೇ ಇದೆ ಎಂದು ದೂರಿದರು.

ಮಾರ್ಗರೆಟ್ ಆಳ್ವಾ ಅವರಿಗೆ ಬೆಂಬಲ: ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಓರ್ವ ಅನುಭವಿ ರಾಜಕಾರಣಿ. ಹಲವು ಹುದ್ದೆ ಅಲಂಕರಿಸಿದ್ದರು. ಇವರನ್ನು ಶರದ್ ಪವಾರ್ ಪ್ರತಿಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಮಹಿಳೆ. ಅವರನ್ನು ನಮ್ಮ ಪಕ್ಷದ ಸದಸ್ಯರು ಬೆಂಬಲಿಸಬೇಕು ಎಂದರು. ಆಳ್ವಾ ಹರಕೆ ಕುರಿ ಎಂಬ ಬಿಜೆಪಿ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಿಂದೆ ಬಿಜೆಪಿಯವರು ಏನು ಮಾಡುತ್ತಿದ್ದರು. ಮುರ್ಮು ಬಿಜೆಪಿ ಅಭ್ಯರ್ಥಿ. ಅವರು ಬಿಜೆಪಿಯ ಹಲವು ಹುದ್ದೆ ಅಲಂಕರಿಸಿದ್ದರು. ಇದೀಗ ಜೆಡಿಎಸ್ ಸಹ ಬೆಂಬಲ ನೀಡಿದೆ. ಜೆಡಿಎಸ್ ನಿಲುವು ಸ್ಪಷ್ಟವಾಗಿಲ್ಲ. ಅವರಿಗೆ ಜಾತ್ಯತೀತ ನಿಲುವು ಅರಿವಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕೇಂದ್ರದ ಜಿಎಸ್​ಟಿ ಹೆಚ್ಚಳ ಸಂಬಂಧ ಪ್ರತಿಪಕ್ಷದ ನಿಲುವು ಕೈಗೊಳ್ಳಲು ಇಂದು ಸಂಜೆ ತುರ್ತು ಸಭೆ ಕರೆದಿದ್ದೇವೆ. ಅಲ್ಲಿ ಚರ್ಚಿಸುತ್ತೇವೆ. ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸುತ್ತೇವೆ. ಬಡವರಿಗೆ ಇದು ಮಾರಕ ನಿರ್ಧಾರ. ನಾವು ನಮ್ಮ ಖಂಡನೆ ಹಾಗೂ ಹೋರಾಟವನ್ನು ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಬಾಂಬ್ ನಿಷ್ಕ್ರಿಯ ದಳದಿಂದ ತನಿಖೆ

ABOUT THE AUTHOR

...view details