ಬೆಂಗಳೂರು:ಶಿವಮೊಗ್ಗದಲ್ಲಿ ಏನೇ ಘಟನೆ ಆಗುತ್ತಿದ್ದರೂ ಅದಕ್ಕೆ ಎಸ್ಡಿಪಿಐ ಕಾರ್ಯಕರ್ತರ ವಿರುದ್ಧ ಇದ್ದ ಪ್ರಕರಣಗಳನ್ನು 2015 ರಲ್ಲಿ ಸಿದ್ದರಾಮಯ್ಯ ವಾಪಸ್ ತೆಗೆದುಕೊಂಡಿದ್ದೇ ಕಾರಣ. ಇನ್ನಾದರೂ ಅವರು ಸಮಾಜ ವಿರೋಧಿ ಶಕ್ತಿಗಳಿಗೆ ಚಿತಾವಣೆ ಕೊಡೋದು ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಬಗ್ಗೆ ಕಾಂಗ್ರೆಸ್ನವರಿಗೆ ಏನು ಗೊತ್ತು? ಸಾವರ್ಕರ್ ಫೋಟೋ ಶಿವಮೊಗ್ಗದಲ್ಲಿ ಒಂದು ಸರ್ಕಲ್ಗೆ ಹಾಕಿದರೆ ಅವರಿಗೆ ಯಾಕೆ ಉರಿ? ಸಿದ್ದರಾಮಯ್ಯ ಯಾಕೆ ಅದಕ್ಕೆ ಸಪೋರ್ಟ್ ಮಾಡುತ್ತಾರೆ? ಮುಸಲ್ಮಾನರ ಏರಿಯಾಕ್ಕೆ ಹಾಕಬೇಡಿ ಎಂದರೆ ಮುಸಲ್ಮಾನರಿಗೆ 1947ರಲ್ಲೇ ಪಾಕಿಸ್ತಾನ ಕೊಟ್ಟಿದ್ದಾರೆ ಹೋಗಬೇಕಿತ್ತು ಅವರು, ಇಲ್ಲಿ ಇರುವವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರಿಗೆ ಗೌರವ ಕೊಟ್ಟೇ ಬದುಕಬೇಕಾಗುತ್ತದೆ ಎಂದು ಹರಿಹಾಯ್ದರು.
ಮತ್ತೊಮ್ಮೆ ದೇಶ ಒಡೆಯುವ ವಿಭಜಕ ಶಕ್ತಿಗಳಿಗೆ ಸಿದ್ದರಾಮಯ್ಯ ಆದರ್ಶ ಆಗಿದ್ದಾರೆ. ಅವರಿಗೆ ಸಿದ್ದರಾಮಯ್ಯ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದಾರೆ. ಚಿತಾವಣೆ ಕೊಡುವುದನ್ನು ಸಿದ್ದರಾಮಯ್ಯ ಮೊದಲು ನಿಲ್ಲಿಸಬೇಕು. ಪ್ರಕರಣ ವಾಪಸ್ ಪಡೆದು ಎಸ್ಡಿಪಿಐಗೆ ಆತ್ಮಸ್ಥೈರ್ಯ ತುಂಬಿದ್ದು ಇವರೇ. ಶಿವಮೊಗ್ಗದಲ್ಲಿ ಏನೇ ಘಟನೆ ಆಗುತ್ತಿದ್ರೂ 2015 ರಲ್ಲಿ ಸಿದ್ದರಾಮಯ್ಯ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡಿದ್ದೇ ಕಾರಣ ಎಂದು ನೇರವಾಗಿ ಆರೋಪಿಸಿದರು.
ಸಾವರ್ಕರ್ ಬಂಗೆಲೆಯಲ್ಲಿರಲಿಲ್ಲ:ಸಾವರ್ಕರ್ ಅವರು ನೆಹರೂ ರೀತಿ ಯಾವುದೋ ಬ್ರಿಟಿಷ್ ಬಂಗಲೆಯಲ್ಲಿ ಇರಲಿಲ್ಲ. ಸಾವರ್ಕರ್ ಬಗ್ಗೆ ಸಿದ್ದರಾಮಯ್ಯರಿಂದ ಸರ್ಟಿಫಿಕೇಟ್ ಬೇಕಾ? ಸಿದ್ದರಾಮಯ್ಯ ಕುಟುಂಬಸ್ಥರೆಲ್ಲಾ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ? ಸಿದ್ದರಾಮಯ್ಯಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲ. ಸಿದ್ದರಾಮಯ್ಯ ಜಂಭದ ಕೋಳಿ ತರಹ.
ಊರಿಗೆಲ್ಲಾ ಒಬ್ಬನೇ ಅಂತಾ ನಾನು ಯಾರಿಗೆ ಬೇಕಾದರೂ ಏಕವಚನದಲ್ಲಿ, ಉಡಾಫೆಯಲ್ಲಿ ಮಾತಾಡಬಹುದು ಎಂಬ ಅಹಂಕಾರದಲ್ಲಿದ್ದಾರೆ. ಸ್ವಾಮೀ ಅಹಂಕಾರ ಬಿಡಿ, ಜನರ ಎದುರು ಯಾವ ಅಹಂಕಾರವೂ ನಡೆಯಲ್ಲ. ಇನ್ನಾದರೂ ಸಮಾಜ ವಿರೋಧಿ ಶಕ್ತಿಗಳಿಗೆ ಚಿತಾವಣೆ ಕೊಡೋದು ನಿಲ್ಲಿಸಿ ಎಂದು ಆಗ್ರಹಿಸಿದರು.