ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮ ಒಪ್ಪಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವ ನೈತಿಕತೆ ಆಧಾರದಲ್ಲಿ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿಗಳು ತಕ್ಷಣ ಸಂಪುಟದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಆರಗ ವಿರುದ್ಧ ಸಿದ್ದು ಕಿಡಿ.. ಕಿಡಿ:ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭ್ರಷ್ಟರು, ಕೊಲೆಗಡುಕರು, ರೇಪಿಸ್ಟ್‌ಗಳನ್ನು ಸಮರ್ಥಿಸುವುದೇ ತನ್ನ ಕರ್ತವ್ಯ ಎಂದು ಗೃಹ ಸಚಿವರು ತಿಳಿದುಕೊಂಡಂತಿದೆ. ಇಂತಹ ವಿಫಲ, ನಿಷ್ಕ್ರಿಯ 'ಚೌಕಿದಾರ'ನಿಂದ ಪೊಲೀಸ್ ಇಲಾಖೆಯೇ ಸುರಕ್ಷಿತವಾಗಿ ಇರಲಾರದು. ಆರಗ ಜ್ಞಾನೇಂದ್ರ ಅವರೇ ಗೃಹಸಚಿವರಾಗಿದ್ದು, ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ನಡೆದರೆ ಜ್ಞಾನೇಂದ್ರ ಅವರಂತಹ ಅಸಮರ್ಥ, ಅಪ್ರಾಮಾಣಿಕ, ನಿಷ್ಕ್ರಿಯರೇ ಪಿಎಸ್ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ ಎಂದಿದ್ದಾರೆ.
ಪಿಎಸ್ಐ ನೇಮಕಾತಿಗೆ ಸರ್ಕಾರ ಯಾವ ಆಧಾರದಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ? ಹಾಗಿದ್ದರೆ ಆ ವರದಿ ಬಿಡುಗಡೆ ಮಾಡಿ. ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲಿಕ್ಕಾಗಿಯೇ? ಇಲ್ಲವೇ ಹಗರಣವನ್ನು ಮುಚ್ಚಿಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾಗಿಯೇ?