ಬೆಂಗಳೂರು: ಮಡಿಕೇರಿಯ ಶಾಲಾ ಆವರಣದಲ್ಲಿ ಯುವ ಜನರಿಗೆ ಶಸ್ತ್ರ ತರಬೇತಿ ನೀಡಿದ ಭಜರಂಗದಳ ನಾಯಕರ ಬಂಧನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ, ಭಜರಂಗದಳ ನಾಯಕರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಡಿಕೇರಿ ಶಾಲೆಯಲ್ಲಿ ಯುವಕರಿಗೆ ಭಜರಂಗದಳ ಶಸ್ತ್ರತರಬೇತಿ ನೀಡಿ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರ್ಕಾರ ಜೀವಂತವಾಗಿದೆಯೇ? ಭಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಎಂ.ಎ.ಅಪ್ಪಚ್ಚು, ಕೆ.ಜಿ.ಬೋಪಯ್ಯ ಮತ್ತು ಸುಜ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಭಜರಂಗ ದಳಕ್ಕೋ? ಶಸ್ತ್ರಾಸ್ತ್ರ ತರಬೇತಿ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.