ಕರ್ನಾಟಕ

karnataka

ETV Bharat / city

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ಆರೋಪ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆರೋಪಿಸಿದ್ದಾರೆ.

ex cm siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jul 23, 2020, 12:39 PM IST

Updated : Jul 23, 2020, 2:54 PM IST

ಬೆಂಗಳೂರು:ವೈದ್ಯಕೀಯ ಉಪಕರಣ ಖರೀದಿ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅವ್ಯವಹಾರ ನಡೆದಿಲ್ಲ. ಇದಕ್ಕೆ ಪೂರಕವಾದ ಯಾವುದೇ ದಾಖಲೆಯನ್ನು 24 ಗಂಟೆಯಲ್ಲಿ ಕೊಡುತ್ತೇನೆ ಎಂದಿದ್ದ ಸಿಎಂ ಯಡಿಯೂರಪ್ಪ ರಾಜ್ಯದ ಜನತೆಗೆ ಸುಳ್ಳು ಹೇಳಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಪ್ರಕಾರ ಬಿಬಿಎಂಪಿಯಲ್ಲಿ 200 ಕೋಟಿ ರೂಪಾಯಿ, ಆರೋಗ್ಯ ಇಲಾಖೆಯಲ್ಲಿ 750 ಕೋಟಿ ರೂಪಾಯಿ, ಜಿಲ್ಲಾಡಳಿತಕ್ಕೆ ಎನ್​ಡಿಆರ್​ಎಫ್​​ ಮೂಲಕ 340 ಕೋಟಿ ರೂಪಾಯಿ, ಕಾರ್ಮಿಕ ಇಲಾಖೆಯಲ್ಲಿ 1000 ಕೋಟಿ ರೂಪಾಯಿ, ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರೂಪಾಯಿ, ಸಮಾಜ ಕಲ್ಯಾಣ, ಆಹಾರ, ಪೊಲೀಸ್, ಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 500 ಕೋಟಿ, ಹಾಸಿಗೆ, ದಿಂಬು‌ ಖರೀದಿಯಲ್ಲಿ 150 ಕೋಟಿ ಸೇರಿ ಒಟ್ಟು 4,167 ಕೋಟಿ ರೂಪಾಯಿ ಮೊತ್ತದ ಅಕ್ರಮ ವ್ಯವಹಾರವಾಗಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇವರ ಮಾತಲ್ಲಿ ಸತ್ಯ ಇದ್ದಿದ್ದರೆ ತಿಂಗಳ ಹಿಂದಿನಿಂದಲೂ ಬರೆದ ಪತ್ರಕ್ಕೆ ಏಕೆ ಉತ್ತರ‌ ನೀಡಿಲ್ಲ. ನೀವು ರಾಜ್ಯದ ಜನತೆಗೆ ಸತ್ಯ ಮುಚ್ಚಿಟ್ಟಿದ್ದೀರಿ. ನೀವು ಪ್ರಾಮಾಣಿಕರು, ಪಾರದರ್ಶಕ ಆಡಳಿತ ನಡೆಸಿದ್ದರೆ ಜನರ ಮುಂದೆ ಸತ್ಯ ಹೇಳಬೇಕಿತ್ತು. ಯಾರೂ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಜನರ ಹಣ ಬಳಸಿ ಮುನ್ನಡೆಯುವಾಗ ಪ್ರತಿ ಹಣದ ಖರ್ಚಿಗೂ ದಾಖಲೆ ಇಡಬೇಕೆಂದರು.

''ಹಗರಣದ ಕುರಿತು ನ್ಯಾಯಾಂಗದ ತನಿಖೆಯಾಗಲಿ''

ಒಟ್ಟು ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ 4 ಸಾವಿರ ಕೋಟಿ ರೂ. ನೀಡಿದೆ. ಅದರಲ್ಲಿ ದೊಡ್ಡ ಮೊತ್ತದ ಅಕ್ರಮವಾಗಿದೆ. ಇದರ ತನಿಖೆ ಆಗಬೇಕು. ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು. 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅಕ್ರಮವಾಗಿದೆ. ರೋಗ ನಿವಾರಣೆಗೆ ನಮ್ಮ ಸಹಕಾರ ಇರಲಿದೆ. ಭ್ರಷ್ಟಾಚಾರಕ್ಕೆ ಸಹಕಾರ ಇಲ್ಲವೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾವು-ನೋವು ಸಂಭವಿಸಿವೆ. ಪ್ರಧಾನಿ ನರೇಂದ್ರ ಮೋದಿ 21 ದಿನ ಕೊಡಿ ಎಂದಿದ್ದರು. ಇಂದು 121ನೇ ದಿನಗಳು ಕಳೆದಿವೆ. ಸೋಂಕಿತರ ಸಂಖ್ಯೆ 12 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು. ಪ್ರಧಾನಿ, ಸಿಎಂ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿದ್ದಾರೆ. ಇಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಇದುವರೆಗೂ ಬಂದಿಲ್ಲ. ವಲಸೆ ಕಾರ್ಮಿಕರು 5 ಲಕ್ಷ ಮಂದಿ ನರಕಯಾತನೆ ಅನುಭವಿಸಿದರು. ಸಿದ್ಧತೆ ಇಲ್ಲದೇ ಲಾಕ್​​ಡೌನ್ ಮಾಡಿ ತಪ್ಪು ಮಾಡಿದ್ದಾರೆ ಎಂದು ದೂರಿದರು.

''ವೆಂಟಿಲೇಟರ್, ಪಿಪಿಇ ಕಿಟ್​ ಖರೀದಿಯಲ್ಲಿ ಅಕ್ರಮ..!''

ಆರೋಗ್ಯ ಇಲಾಖೆಯಲ್ಲಿ ಮಾಸಿಕ ಕೆಡಿಪಿ ಸಭೆಯಲ್ಲಿ ನೀಡಿದ ಮಾಹಿತಿ 9,689 ಕೋಟಿ ಅನುದಾನ ಪರಿಷ್ಕರಿಸಿ ನೀಡಲಾಗಿದೆ. 1,527 ಕೋಟಿ ಬಿಡುಗಡೆ ಆಗಿದೆ. 3,322 ಕೋಟಿ ರೂ. ಖರ್ಚಾಗಿದೆ. ಬಿಡುಗಡೆ ಆಗಿದ್ದಕ್ಕಿಂತ ಹೆಚ್ಚು ಹಣ ಖರ್ಚಾಗಿದೆ. ನನ್ನ ಬಳಿ 14 ವಿಚಾರಗಳ ಮಾಹಿತಿ ಇದೆ. ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮವಾಗಿದೆ. ಕೇಂದ್ರ ಸರ್ಕಾರ ಪ್ರಧಾನಿ ಕಾರ್ಯಾಲಯದಿಂದ ಪಿಎಂ ಕೇರ್ ಫಂಡ್ ದೇಶಕ್ಕೆ 50 ಸಾವಿರ ವೆಂಟಿಲೇಟರ್ ಖರೀದಿಸಿದ್ದು ಒಂದು ವೆಂಟಿಲೇಟರ್​ಗೆ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದೆ.

ತಮಿಳುನಾಡಿನವರು ಒಂದು ವೆಂಟಿಲೇಟರ್ 4.78 ಲಕ್ಷ ರೂಪಾಯಿಯಂತೆ 1000 ವೆಂಟಿಲೇಟರ್ ಖರೀದಿಸಿದ್ದಾರೆ. ಆದರೆ ರಾಜ್ಯದವರು ಇದನ್ನು ಪ್ರತಿ ಯೂನಿಟ್​​ಗೆ 5.60 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಮತ್ತೊಮ್ಮೆ 12.30 ಲಕ್ಷ ರೂಪಾಯಿ. ಇನ್ನೊಂದು ಹಂತದಲ್ಲಿ 18 .20 ಲಕ್ಷ ರೂಪಾಯಿಗೆ‌ ಖರೀದಿಸಿದ್ದಾರೆ. ಇದು ಪಾರದರ್ಶಕವೇ? ಇದನ್ನು ಭ್ರಷ್ಟಾಚಾರ ಅನ್ನದೇ ಭ್ರಷ್ಟಾಚಾರ ಸುವಾಸನೆ ಎನ್ನಬೇಕೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದರ ಜೊತೆಗೆ ಪಿಪಿಇ ಕಿಟ್​ಗಳ ಖರೀದಿಯಲ್ಲೂ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Last Updated : Jul 23, 2020, 2:54 PM IST

ABOUT THE AUTHOR

...view details