ಬೆಂಗಳೂರು: ದೇಶದಲ್ಲಿ ಬಹಿರಂಗವಾಗಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಶ್ರೀಮತಿ ಇಂದಿರಾಗಾಂಧಿ ಬೆಲೆ ತೆತ್ತಿದ್ದಾರೆ. ಈಗ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದೆ. ಇದಕ್ಕಾಗಿ ದೊಡ್ಡ ಮಟ್ಟದ ಬೆಲೆ ತೆರಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಇಂದು ಭಾಗವಹಿಸಿ ನಿಯಮ 60ರ ಅಡಿ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿ ಮಾತನಾಡಿದ ಅವರು, ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಜಾರಿಗೆ ತರಲು ಏನು ಕಾರಣ? ಯಾಕಾಗಿ ಅವರು ಈ ನಿರ್ಧಾರಕ್ಕೆ ಬಂದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆದರೆ, ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಇಂದಿರಾಗಾಂಧಿ ಬೆಲೆ ತೆತ್ತರು. ಮುಂದೆ ಭರ್ಜರಿ ಗೆಲುವಿನೊಂದಿಗೆ ಪ್ರಧಾನಿಯಾದರು.
ಅವತ್ತು ತುರ್ತು ಸ್ಥಿತಿ ವಿರೋಧಿಸಿ ನಾನೂ ಜೈಲಿಗೆ ಹೋಗಿದ್ದೆ ಎಂದರು. ಕೂಡಲೇ ಮಧ್ಯಪ್ರವೇಶಿಸಿದ ಸಚಿವ ಈಶ್ವರಪ್ಪನವರು, ವಾಕ್ ಸ್ವಾತಂತ್ರ್ಯ, ಪತ್ರಿಕಾಸ್ವಾತಂತ್ರ್ಯದ ಹರಣವನ್ನು ವಿರೋಧಿಸಿ ನಾವೂ ಜೈಲಿಗೆ ಹೋಗಿದ್ದೆವು. ನಾವೂ ದೇಶಭಕ್ತರು, ಭಾರತ ಮಾತಾ ಕೀ ಜೈ, ಒಂದೇ ಮಾತರಂ ಅಂತಾ ಘೋಷಣೆ ಕೂಗುವರು ಅಂದರು. ಇದರಿಂದಾಗಿ ಕೆಂಡಾಮಂಡಲರಾದ ಸಿದ್ದರಾಮಯ್ಯ, ಭಾರತ ಮಾತೇ ನಿಮ್ಮ ಆಸ್ತಿಯೇನ್ರೀ, ನಾವೆಲ್ಲ ಭಾರತ ಮಾತೆಯ ಮಕ್ಕಳೇ.. ದೇಶದ ನೂರಾ ಮೂವತ್ತೈದು ಕೋಟಿ ಜನರೂ ದೇಶಭಕ್ತರೇ.. ಅದನ್ನು ನೀವೇನೂ ಗುತ್ತಿಗೆ ತೆಗೆದುಕೊಂಡಿಲ್ಲ ಎಂದು ಗುಡುಗಿದರು.
ಬಹಿರಂಗ ತುರ್ತು ಸ್ಥಿತಿಗೂ, ಅಘೋಷಿತ ತುರ್ತು ಸ್ಥಿತಿಗೂ ಇರುವ ಅಂತರ ಗಮನಿಸಿ ಎಂದರು. ಇಂದಿರಾಗಾಂಧಿ ಅವರೇನೂ ಅಘೋಷಿತ ತುರ್ತು ಸ್ಥಿತಿ ಹೇರಿರಲಿಲ್ಲ. ಬಹಿರಂಗವಾಗಿಯೇ ತುರ್ತು ಸ್ಥಿತಿ ಹೇರಿದ್ದರು. ಆದರೆ, ಈಗ ಇರುವುದು ಅಘೋಷಿತ ತುರ್ತು ಸ್ಥಿತಿ. ಸಿಎಎ, ಎನ್‌ಆರ್‌ಸಿ ಮೂಲಕ ಹೇರಿರುವ ಈ ಅಘೋಷಿತ ತುರ್ತು ಸ್ಥಿತಿಯ ವಿರುದ್ಧ ಇಡೀ ದೇಶ ಹೋರಾಡುತ್ತಿದೆ. ಯಾವುದೋ ಒಂದು ವರ್ಗ ಸಿಎಎ,ಎನ್‌ಆರ್‌ಸಿ ವಿರೋಧಿಸುತ್ತಿಲ್ಲ. ಬದಲಿಗೆ ಎಲ್ಲ ವರ್ಗಗಳು, ಮಹಿಳೆಯರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು ಸೇರಿ ಎಲ್ಲರೂ ವಿರೋಧಿಸುತ್ತಿದ್ದಾರೆ. ಹೀಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರುದ್ಧ ಪ್ರತಿಭಟಿಸುವುದು ತಪ್ಪೇನಲ್ಲ. ಆದರೆ, ಇಲ್ಲಿ ಪ್ರತಿಭಟಿಸಿದವರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಿ ಬಂಧಿಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರವೂ ಮಾಡುವಂತಿಲ್ಲ. ರಾಜ್ಯ ಸರ್ಕಾರವೂ ಮಾಡುವಂತಿಲ್ಲ. ಸಂವಿಧಾನವೂ ಮಾಡುವಂತಿಲ್ಲ ಎಂದರು.
ಮಾತಿನ ಚಕಮಕಿ:ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪಾಕ್ ಪರ ಮಾತನಾಡುವವರು, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರ ಬಗ್ಗೆ ಏರಿದ ಧ್ವನಿಯಲ್ಲಿ ಕಚ್ಚಾಟ ನಡೆಯಿತು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಿಎಂ ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿರುವಾಗ ಬೇರೆಯವರು ಮಾತನಾಡಬೇಡಿ ಎಂದರು. ಸಿಎಂ ಮಾತನ್ನು ಪ್ರಶಂಸಿಸಿದ ಸಿದ್ದರಾಮಯ್ಯ, ಅನುಭವ ಇರುವವರು ಮಾತ್ರ ಹೀಗೆ ಮಾತನಾಡಲು ಸಾಧ್ಯ. ಉಳಿದವರಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ ಎಂದು ಆಡಳಿತ ಪಕ್ಷದ ಸಚಿವರು, ಶಾಸಕರನ್ನು ಕುಟುಕಿದರು. ನಂತರ ತಮ್ಮ ಮಾತು ಮುಂದುವರಿಸಿ, ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆ ಹಕ್ಕನ್ನು ನ್ಯಾಯಾಲಯದಿಂದಾಗಲೀ, ಸಂಸತ್ತಿನಿಂದಾಗಲಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.
ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟು, ಪ್ರತಿಭಟನೆಯ ಹಕ್ಕನ್ನು ಯಾರೂ ಕಿತ್ತುಕೊಳ್ಳಲಾಗದು. ಪ್ರತಿಭಟನೆ ಮಾಡುವುದು ಸಂವಿಧಾನಬದ್ಧ ಹಕ್ಕು ಎಂದು ಹೇಳಿದೆ. ಈಗಲೂ ಅದು ಅನ್ವಯ ಎಂದರು. ಆದರೆ, ಮಂಗಳೂರು, ಬೀದರ್ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಪ್ರತಿಭಟನಾಕಾರರು ಸುಳ್ಳು ಮೊಕದ್ದಮೆ ಹೂಡುತ್ತಿದ್ದಾರೆ. ನಾವು ಪೊಲೀಸರನ್ನು ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಗಾಗಿ ಇಟ್ಟುಕೊಂಡಿದ್ದೇವೆಯೇ ಹೊರತು, ಸರ್ಕಾರದ ಏಜೆಂಟರನ್ನಾಗಿ ಇಟ್ಟುಕೊಂಡಿಲ್ಲ ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರವೂ ಸರ್ಕಾರಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.