ಬೆಂಗಳೂರು:ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರು ಇಡಬೇಕು ಎನ್ನುವ ಕುರಿತು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾನೂನು ವಿಶ್ವವಿದ್ಯಾಲಯಕ್ಕೆ ಸಿದ್ದಪ್ಪ ಕಂಬಳಿ ಹೆಸರು; ಸಿಎಂ ಬೊಮ್ಮಾಯಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಪ್ರಸ್ತಾಪ ಕುರಿತು ಮಾತನಾಡಿದ ಸಿಎಂ, ಕರ್ನಾಟಕ ಕಾನೂನು ವಿವಿಗೆ ಸರ್ ಸಿದ್ದಪ್ಪ ಕಂಬಳಿ ಹೆಸರಿಡಬೇಕು ಎನ್ನುವ ಪ್ರಸ್ತಾಪ ಬಂದಿದೆ. ಸಿದ್ದಪ್ಪ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಏಳು ಖಾತೆ ಹೊಂದಿದ್ದ ನಾಯಕ ಅವರು. ಡಾ.ಬಿ.ಆರ್ ಅಂಬೇಡ್ಕರ್ ಜೊತೆ ನಿಕಟ ಸಂಬಂಧ ಹೊಂದಿದ್ದವರು, ಅವರ ಹೆಸರಿಡಲು ನಮಗೆ ಒಲವಿದೆ. ನಮ್ಮ ಕಾನೂನು ಸಚಿವರು, ವಿಸಿ ಜೊತೆ ಈ ಸಂಬಂಧ ಮಾತುಕತೆ ನಡೆಸಲಾಗುತ್ತದೆ. ಸಿಂಡಿಕೇಟ್‌ನಲ್ಲಿಯೂ ಇದು ಚರ್ಚೆಯಾಗಿ ಶಿಫಾರಸು ಮಾಡಬೇಕು. ಈ ಬಗ್ಗೆ ಸಣ್ಣ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸರಳೀಕರಣ:
ರಾಜ್ಯದ ಪ್ರತಿ ಗ್ರಾಮಕ್ಕೂ ಬ್ರಾಡ್ ಬ್ಯಾಂಡ್ ಮತ್ತು ಇಂಟರ್ನೆಟ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸರಳೀಕರಣಕ್ಕೆ ಪೂರಕವಾಗಿ ಟೆಲಿಕಾಂ ನೀತಿ ತರಲಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ತಿಳಿಸಿದರು.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಸನ್ನ ಕುಮಾರ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕೋವಿಡ್ ಕಾರಣದಿಂದ ಜನ ಹಳ್ಳಿಗೆ ವಲಸೆ ಹೋಗುತ್ತಿದ್ದಾರೆ. ಇಂಟರ್ನೆಟ್, ಬ್ರಾಡ್ ಬ್ಯಾಂಡ್ ಉನ್ನತೀಕರಣ ಮಾಡಲಾಗುತ್ತಿದೆ. ಡಿಜಿಟಲ್ ಪ್ಲಾಟ್ ಫಾರಂ ಉನ್ನತಿಗೆ ಆದ್ಯತೆ ನೀಡಲಾಗಿದೆ. ಸರಳವಾಗಿ, ಸುಲಭವಾಗಿ ಬ್ರಾಡ್ ಬ್ಯಾಂಡ್ ಮೂಲಸೌಕರ್ಯ ಒದಗಿಸಲು ಪೂರಕವಾಗಿ ಟೆಲಿಕಾಂ ಪಾಲಿಸಿ ತರಲಾಗಿದೆ. ಎಲ್ಲಾ ಗ್ರಾಮದಲ್ಲೂ ಇಂಟರ್ನೆಟ್ ಸೌಲಭ್ಯ ಹೆಚ್ಚಿಸಲು ಆದ್ಯತೆ ನೀಡಲಾಗಿದ್ದು, ಕಾಲೇಜುಗಳಲ್ಲಿ ವೈಫೈ ಕಲ್ಪಿಸಲಾಗಿದೆ ಎಂದರು.