ಬೆಂಗಳೂರು: ಫೈವ್ ಸ್ಟಾರ್ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಹ್ಯಾಕರ್, ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್‌ನನ್ನು ಅರೆಸ್ಟ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇಬ್ಬರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಲಾಟೆಯ ವೇಳೆ ಮದ್ಯ ಸೇವಿಸಿರೋದು ದೃಢಪಟ್ಟಿದ್ದು, ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣು ಭಟ್ ಇಬ್ಬರಿಗೂ ಮಾದಕವಸ್ತು ಸೇವನೆ ಪರೀಕ್ಷೆ ಮಾಡಿಸಲಾಗಿದೆ. ಸದ್ಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣುಭಟ್ ಇಬ್ಬರನ್ನು ಪ್ರತ್ಯೇಕವಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನೆಡೆಸುತ್ತಿದ್ದಾರೆ. ಶ್ರೀಕೃಷ್ಣನನ್ನು ಭೇಟಿಯಾಗಲು ವಿಷ್ಣುಭಟ್ ಬಂದಿದ್ದು ಯಾಕೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಎರಡೂವರೆ ತಿಂಗಳಿಂದ ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿದ್ದ ಶ್ರೀಕೃಷ್ಣನ ಹೋಟೆಲ್ ಬಿಲ್ಗೆ ವಿಷ್ಣುಭಟ್ ಫಂಡಿಂಗ ಮಾಡಿದ್ದಾನೆ. ಇದಕ್ಕೆ ಕಾರಣವನ್ನು ತನಿಖೆಯಿಂದ ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಹಲವು ಆಯಾಮಗಳಲ್ಲಿ ವಿಚಾರಣೆ:
ಶ್ರೀಕೃಷ್ಣ ತಂಗಿದ್ದ ಹೋಟೆಲ್ ರೂಂ ತಪಾಸಣೆ ನಡೆಸಿದ್ದ ಪೊಲೀಸರು ನಾಲ್ಕು ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದಾರೆ. ಶ್ರೀಕಿ ಈ ಹಿಂದೆ ಸಿಸಿಬಿಯಿಂದ ಆರೆಸ್ಟ್ ಆದಾಗ ಹಲವು ಸ್ಫೋಟಕ ವಿಚಾರಗಳು ಹೊರಬಂದಿದ್ದವು. ಈಗಲೂ ಸಹ ಹಲವು ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.