ಬೆಂಗಳೂರು: ರಾಜ್ಯದಲ್ಲಿ ನೆಲೆಸಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರು ತವರಿಗೆ ತೆರಳಲು ಅನುಕೂಲವಾಗುವಂತೆ ಕಾರ್ಯಚರಣೆಯಲ್ಲಿದ್ದ ವಿಶೇಷ ಶ್ರಮಿಕ್ ರೈಲು ಸೇವೆ ಸ್ಥಗಿತಗೊಳಿಸಿರುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ವಲಸೆ ಕಾರ್ಮಿಕರ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.
ಸರ್ಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿ, ಕಳೆದ ಎರಡು ತಿಂಗಳಲ್ಲಿ ರಾಜ್ಯದಿಂದ ಸಾಕಷ್ಟು ವಲಸೆ ಕಾರ್ಮಿಕರು ಶ್ರಮಿಕ್ ರೈಲು ಮೂಲಕ ಉಚಿತವಾಗಿ ತವರಿಗೆ ಹೋಗಿದ್ದಾರೆ. ಹೀಗಾಗಿ, ಶ್ರಮಿಕ್ ರೈಲುಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೆ ಮನವಿ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ರಾಜ್ಯದಲ್ಲಿರುವ ಎಲ್ಲ ಮಸ್ಟರಿಂಗ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.
ವಾದ ಒಪ್ಪದ ಪೀಠ, ಸರ್ಕಾರದ ನಿರ್ಧಾರ ಮೇಲ್ನೋಟಕ್ಕೆ ಸರಿ ಕಾಣುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಬೆಂಗಳೂರಿನ ಪರಿಸ್ಥಿತಿ ಹಿಂದಿಗಿಂತ ಕೆಟ್ಟದಾಗಿದೆ. ಕೊರೊನಾ ಸೋಂಕು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಸರ್ಕಾರಿ ಕಚೇರಿಗಳಿಗೆ ಬರಲು ಸಿಬ್ಬಂದಿಯೇ ಭೀತಿಗೊಳ್ಳುತ್ತಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ಕಾರ್ಮಿಕರು ಊರು ಸೇರಲು ಇರುವ ಏಕೈಕ ಆಸರೆ ಶ್ರಮಿಕ್ ರೈಲು ವ್ಯವಸ್ಥೆನ್ನೂ ನಿಲ್ಲಿಸಿದರೆ ಕಾರ್ಮಿಕರ ಪಾಡೇನು. ಹೀಗಾಗಿ, ಸರ್ಕಾರ ಶ್ರಮಿಕ್ ರೈಲು ಸೇವೆ ನಿಲ್ಲಿಸಬೇಕೆನ್ನುವ ನಿಲುವನ್ನು ಮರುಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿತು.
ಅರ್ಜಿ ವಿಚಾರಣೆ ಆರಂಭದಲ್ಲಿ ಕಾರ್ಮಿಕರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದಿಸಿ, ಈಗಲೂ ಶ್ರಮಿಕ್ ರೈಲು ಸೇವೆ ಕಲ್ಪಿಸುವಂತೆ ವಲಸೆ ಕಾರ್ಮಿಕರಿಂದ ಮನವಿಗಳು ಬರುತ್ತಿವೆ. ಸರ್ಕಾರ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸೇವೆ ಮುಂದುವರೆಸಬೇಕು ಎಂದು ಕೋರಿದರು.