ಬೆಂಗಳೂರು : ಕಂದಾಯ ಇಲಾಖೆಗೆ ಸೇರಿದ ಮೈದಾನದಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ ಮೇಲೆ ಗಣಪತಿ ಇಡೋಕೂ ಬಿಡಬೇಕಲ್ಲವೇ? ಇಲ್ಲದಿದ್ದರೆ ನಮಾಜ್ ಮಾಡಲು ಬಿಡಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗಲಿದೆ. ಹಾಗಾಗಿ ಇದಕ್ಕೆ ಅವಕಾಶ ನೀಡದೇ ದೇವಾಲಯ ಮಂಡಳಿ ಅರ್ಜಿ ಸಲ್ಲಿಸಿದರೆ ಅವಕಾಶ ನೀಡಬೇಕು. ಸಂವಿಧಾನ ಒಪ್ಪುವವರು ಗಣಪತಿ ಕೂರಿಸಲು ಒಪ್ಪಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಷಯ ಚರ್ಚೆಗೆ ಬಂದಿದೆ. ಅದು ಕಂದಾಯ ಇಲಾಖೆಗೆ ಸೇರಿದ ಜಾಗ, ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಬ್ರಿಟಿಷರ ಕಾಲದಲ್ಲೇ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ತಿಲಕರು ಮೊದಲು ಗಣೇಶ ಕೂರಿಸಿದ್ದು ಇಲ್ಲಿ. ಯಾಕೆ ಕೂರಿಸಬಾರದು ಎನ್ನುವ ಹಕ್ಕಿನ ವಿಚಾರ ಬರುತ್ತದೆ. ಬೇಕು, ಬೇಡ ಅನ್ನೋದನ್ನು ಕಂದಾಯ ಇಲಾಖೆ ಹೇಳಬೇಕು ಎಂದರು.
ಸೂಕ್ತ ನಿರ್ಧಾರ ಕೈಗೊಳ್ಳಬೇಕಿರುವುದು ಕಂದಾಯ ಇಲಾಖೆ:ನಾನು ಗಣೇಶ ಕೂರಿಸಬೇಕು ಅಂತ ಹೇಳುತ್ತೇನೆ. ಆದರೆ ಸೂಕ್ತ ನಿರ್ಣಯ ತೆಗೆದುಕೊಳ್ಳೋದು ಕಂದಾಯ ಇಲಾಖೆ. ಆದರೆ ಗಣಪತಿ ಕೂರಿಸಲು ಬಿಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಗಣಪತಿ ಕೂರಿಸಿದ್ರೆ ಜಾತಿ ಕೆಡುತ್ತಾ? ಜಾತಿ ಕೆಡುತ್ತೆ ಅನ್ನೋರು ಸಂವಿಧಾನ ವ್ಯವಸ್ಥೆ ಒಪ್ಪಿಲ್ಲ ಅನ್ನುವಂತಾಗುತ್ತದೆ. ಸಂವಿಧಾನ ಒಪ್ಪುವವರು ಗಣಪತಿ ಕೂರಿಸಲು ಒಪ್ಪಬೇಕು ಎಂದರು.
ಮುಸ್ಲಿಂ ಪ್ರದೇಶದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಸಿದ್ದರಾಮಯ್ಯ ಮಾನಸಿಕತೆ ದೇಶ ವಿಭಜಕರಿಗೆ ಪುಷ್ಟಿ ನೀಡುತ್ತದೆ. ಮುಸ್ಲಿಂ ಇರೋ ಕಡೆ ಟಿಪ್ಪು ಫೋಟೋ ಹಾಕಬೇಕಿತ್ತು, ಸಾವರ್ಕರ್ ಫೋಟೋ ಬೇಡ ಎಂದರೆ ಮುಸ್ಲಿಂ ಏರಿಯಾ ಅಂದರೆ ಪಾಕಿಸ್ತಾನಕ್ಕೆ ಸೇರಿಸಬೇಕು ಅಂತಾನಾ? ಅವರ ಏರಿಯಾ ಅಂದರೆ ಉಳಿದವರು ಕಾಲಿಡಬಾರದು ಅಂತಾನಾ? ಸಿದ್ದರಾಮಯ್ಯ ಅರಿವಿದ್ದು ಹೇಳಿದ್ದಾರೋ, ಇಲ್ಲವೋ, ಅವರ ಹೇಳಿಕೆ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಸಾವರ್ಕರ್ಗೆ ಸರ್ಟಿಫಿಕೇಟ್ ಕೊಡಲು ಇವರ್ಯಾರು?:ಹಿಂದೂ, ಮುಸ್ಲಿಂ ಎನ್ನುವ ಮಾನಸಿಕತೆಯಿಂದಲೇ ಅನೇಕ ದೇಶಗಳು ವಿಭಜನೆ ಆಗಿದ್ದು. ದೇಶದ ಸಂವಿಧಾನಕ್ಕೆ ಏನು ಬೆಲೆ ಇದೆ. ಮುಸ್ಲಿಂ ಇರೋ ಕಡೆ ಫ್ಲೆಕ್ಸ್ ಹಾಕಬಾರದು ಅನ್ನೋದೇ ಸರಿಯಲ್ಲ. ಇವರ ಹೇಳಿಕೆ ದುರದೃಷ್ಟಕರ. ಸಾವರ್ಕರ್ ಒಂದು ನೆಪ. ಇಂದು ಸಾವರ್ಕರ್, ನಾಳೆ ಅಂಬೇಡ್ಕರ್, ಗಾಂಧಿ ಎಲ್ಲರನ್ನೂ ವಿರೋಧಿಸುತ್ತಾರೆ. ಅವರು ದೇಶ ವಿಭಜಕರು, ಪ್ರತ್ಯೇಕತಾವಾದಿಗಳು. ಸಾವರ್ಕರ್ ಅವರಿಗೆ ಸರ್ಟಿಫಿಕೇಟ್ ಕೊಡಲು ಇವರು ಯಾರು ಎಂದು ವಾಗ್ದಾಳಿ ನಡೆಸಿದರು.
ಕ್ಲಬ್ ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಿಟಿ ರವಿ ಕೆಂಡಾಮಂಡಲರಾದರು. ಇಂತಹ ಘಟನೆಗಳು ಸಣ್ಣ ಅಂತ ಲಘುವಾಗಿ ಪರಿಗಣಿಸಬಾರದು ಪಾಕಿಸ್ತಾನಕ್ಕೆ ಹೋಗುವವರಿಗೆ ಫ್ರೀ ವೀಸಾ ಕೊಡಬೇಕು. ಪಾಕಿಸ್ತಾನಕ್ಕೆ ಹೋಗುವವರು ಇಲ್ಲಿರುವುದಕ್ಕೆ ಲಾಯಕ್ಕಿಲ್ಲ. ಹೋದರೆ ಹೋಗ್ಲಿ ಅಂತ ಅವ್ರನ್ನ ಕಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿ :ಗಣಪತಿ ಹಬ್ಬಕ್ಕೆ ಅಡ್ಡ ಬಂದ್ರೆ ಸರಿಯಾದ ಬೆಲೆ ತೆರಬೇಕಾಗುತ್ತದೆ: ಕೆ ಎಸ್ ಈಶ್ವರಪ್ಪ