ಬೆಂಗಳೂರು: ನಗರದಲ್ಲಿಹೊಸ ವರ್ಷಾಚರಣೆಗೆ ಅವಕಾಶ ಕೊಡಬಾರದು. ಈಗಾಗಲೇ ಅಲ್ಲಿ ದೇಶದ್ರೋಹಿ ಚಟುವಟಿಕೆ ನಡೆಯುತ್ತಿರೋದ್ರಿಂದ ಈ ಸಂದರ್ಭ ದುರುಪಯೋಗ ಆಗಬಹುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ, ಹಿಂಸಾಚಾರ ನಡೆದ ಮಂಗಳೂರು ಸೇರಿದಂತೆ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕ ಹೊಸ ವರ್ಷಾಚರಣೆ ಮಾಡಲು ಅವಕಾಶ ಕೊಡುವುದು ಬೇಡ. ಈ ಪ್ರದೇಶಗಳಲ್ಲಿ ಡಿಸೆಂಬರ್ 31ರ ರಾತ್ರಿ ಕೆಲ ಸಂಘಟನೆಗಳು ಗೊಂದಲ ಸೃಷ್ಟಿಸಿ ಪರಿಸ್ಥಿತಿಯ ದುರಪಯೋಗ ಮಾಡಬಹುದು ಎಂಬ ಶಂಕೆ ಇದೆ. ಬೇಕಾದರೆ ಒಳಾಂಗಣಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಪೊಲೀಸರು ಅನುಮತಿ ಕೊಡಬಹುದು. ಹೆಣ್ಣುಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆಂದು ತಿಳಿಸಿದರು.
ಮಂಗಳೂರಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕೊಡಬಾರದು: ಶೋಭಾ ಕರಂದ್ಲಾಜೆ ಏಸು ಪ್ರತಿಮೆ ನಿರ್ಮಾಣದ ಬಗ್ಗೆ ವಿರೋಧ:ಕನಕಪುರದಲ್ಲಿ ಇರುವುದು ಏಸು ಬೆಟ್ಟ ಅಲ್ಲ, ಕಪಾಲಿ ಬೆಟ್ಟ. ಕಪಾಲಿ ಎಂದರೆ ಶಿವ. ಅಲ್ಲಿ ಏಸು ಪ್ರತಿಮೆ ನಿರ್ಮಿಸಲು ನಾವು ಬಿಡಲ್ಲ, ಸರ್ಕಾರವೂ ಬಿಡಲ್ಲ ಎಂದರು. ಸೋನಿಯಾ ಗಾಂಧಿ ಮನವೊಲಿಕೆಗೆ ಡಿ.ಕೆ.ಶಿವಕುಮಾರ್ ಏಸು ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಮಂಗಳೂರಲ್ಲಿ ಖಾದರ್ ಹೇಳಿಕೆ ಹಾಗೂ ಡಿ.ಕೆ.ಶಿವಕುಮಾರ್ ಏಸು ಪ್ರತಿಮೆ ನಿರ್ಮಿಸಲು ಹೊರಟಿರೋದನ್ನ ನೋಡಿದರೆ ಇದು ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಪ್ರಯತ್ನವೇನೋ ಎಂಬ ಅನುಮಾನ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರನ್ನು ಪ್ರಚೋದಿಸುವ ಹೇಳಿಕೆ ತಪ್ಪು:ಮರಾಠಿಗರು ಮತ್ತು ಕನ್ನಡಿಗರು ಬೆಳಗಾವಿಯಲ್ಲಿ ಸಹೋದರರ ರೀತಿ ಬದುಕುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಜನರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದರು. ಯಾರೇ ಆಗಲಿ ಪ್ರಚೋದಿಸುವ, ಎತ್ತಿಕಟ್ಟುವ ಕೆಲಸ ಮಾಡಬಾರದು. ಕನ್ನಡಿಗರು, ಮರಾಠಿಗರು ಶಾಂತಿಯಿಂದ ಬದುಕುತ್ತಿದ್ದಾರೆ ಎಂದರು.