ಬೆಂಗಳೂರು :ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಓಟಿಟಿ ಪ್ಲಾಟ್ ಫಾರಂಗಳು ಬಂದು ಮನರಂಜನೆ ನೀಡುತ್ತಿವೆ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿವೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆ ಆಗುತ್ತಿದೆ. ಟಾಕೀಸ್ ಎಂಬ ಆ್ಯಪ್ ಕನ್ನಡಿಗರಿಂದ ಕನ್ನಡಿಗರಿಗಾಗಿ ಸಿದ್ಧಗೊಂಡಿರುವ ಈ ಟಾಕೀಸ್ ಆ್ಯಪ್ನ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಸೆಂಚುರಿ ಸ್ಟಾರ್, ಈ ಸಂಸ್ಥೆಯ ಬೆಳವಣಿಗೆ ಕಂಡು ಖುಷಿಯಾಗುತ್ತಿದೆ. ಕೆಲಸ ಕೊಟ್ಟವರು ಅನ್ನದಾತರು ಎಂದು ಅಪ್ಪಾಜಿ ಹೇಳುತ್ತಿದ್ದರು. ರತ್ನಾಕರ್ ಅವರನ್ನು ನೋಡಿದರೆ ಹಾಗೆ ಅನಿಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇನ್ನೂ ಟಾಕೀಸ್ ಬಗ್ಗೆ ಹೇಳಬೇಕಾದರೆ, ಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು. ನಾನು ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದೇನೆ.
ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸಿರೀಸ್ ನೋಡಿದ್ದೀನಿ. ನನ್ನ ಮಗಳು ನಿರ್ಮಿಸಿರುವ ವೆಬ್ ಸಿರೀಸ್ ಸಹ ಸದ್ಯದಲ್ಲೇ ಇದೇ ಟಾಕೀಸ್ನಲ್ಲಿ ಬರಲಿದೆ. ಮುಂದೆ ನಾನು ಕೂಡ ಒಂದು ವೆಬ್ ಸಿರೀಸ್ ನಿರ್ಮಿಸಿ, ನಟಿಸಲಿದ್ದೇನೆ. ಟಾಕೀಸ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವರಾಜಕುಮಾರ್ ಹಾರೈಸಿದರು.
ಕಟ್ಟಡ ನಿರ್ಮಾಣದಿಂದ ಹಿಡಿದು, ಸಿನಿಮಾ ನಿರ್ಮಾಣದ ತನಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಯಂಪ್ರಭ ಸಂಸ್ಥೆ ಈ ಉಪಯುಕ್ತ "ಟಾಕೀಸ್" ಆ್ಯಪ್ ಬಿಡುಗಡೆ ಮಾಡಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ವಾಕ್ಯದ ಮೂಲಕ ಈ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಮೂಲತಃ ಉದ್ಯಮಿಯಾಗಿರುವ ರತ್ನಾಕರ್ ಕಾಮತ್ ಈ ಸಂಸ್ಥೆಯ ಮುಖ್ಯಸ್ಥರು. ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ "ಮಾಲ್ಗುಡಿ ಡೇಸ್" ಚಿತ್ರವನ್ನು ನಿರ್ಮಾಣ ಮಾಡಿದ್ದರು.