ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಬಳಿಕ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಅರ್ಜುನ್ ಗೌಡ. ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಅಂತಾ ಕರೆಯಿಸಿಕೊಂಡಿರುವ ರಾಮು ನಿರ್ಮಾಣದ ಹೈ ಬಜೆಟ್ ಸಿನಿಮಾ ಇದಾಗಿದೆ.
ಅರ್ಜುನ್ ಗೌಡ ಸಿನಿಮಾವನ್ನ ನಿರ್ಮಾಪಕ ರಾಮು ಬಿಡುಗಡೆ ಮಾಡಲು ಸಜ್ಜಾಗಿದ್ದರು. ಆದರೆ ವಿಧಿಯಾಟದ ಮುಂದೆ ನಿರ್ಮಾಪಕ ರಾಮು ಅವರು ಏಪ್ರಿಲ್ 26 ರಂದು ಕೊರೊನಾಗೆ ಬಲಿಯಾದರು. ರಾಮು ನಿಧನ ಸುದ್ದಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. ರಾಮು ಪತ್ನಿ ಮಾಲಾಶ್ರೀಗೆ, ಗಂಡನ ಅಗಲಿಕೆ ನೋವಿನಿಂದ ಹೊರಗಡೆ ಬರೋದಿಕ್ಕೆ ಬಹಳ ಸಮಯ ಬೇಕಾಯಿತು.
ಬಹಳ ದಿನಗಳ ಬಳಿಕ ನೋವಿನ ಮಧ್ಯೆ ಮಾಲಾಶ್ರೀ, ಪತಿ ರಾಮು ನಿರ್ಮಾಣದ ಕೊನೆಯ ಸಿನಿಮಾ ಅರ್ಜುನ್ ಗೌಡ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ಶ್ರೀಮುರಳಿ ಅವರು ಮಾಲಾಶ್ರೀ ಜೊತೆಗೆ ಬೆಂಬಲಕ್ಕೆ ನಿಂತಿದ್ದಾರೆ.
ಅರ್ಜುನ್ ಗೌಡ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯನ್ನು ನಿರ್ಮಾಪಕ ರಾಮು ಅವರು ಕಟ್ಟಿದ್ದರು. ಆದರೆ, ಅವರು ನಮ್ಮ ಜೊತೆ ಈಗ ಇಲ್ಲ. ಈ ಸಿನಿಮಾ ಬಿಡುಗಡೆ ಹೊಣೆಯನ್ನ ಮಾಲಾಶ್ರೀ ಮೇಡಂ ತೆಗೆದುಕೊಂಡಿರೋದು ದೊಡ್ಡ ವಿಷಯ. ಈ ಚಿತ್ರದ ಟ್ರೈಲರ್ ನೋಡಿದ್ದೀನಿ. ಬಹಳ ಅದ್ಧೂರಿಯಾಗಿ ಮೂಡಿ ಬಂದಿದೆ.