ಬೆಂಗಳೂರು:ಸರ್ಕಾರದ ಹೊಸ ಪಠ್ಯಕ್ರಮಗಳಲ್ಲಿ ಬಸವಣ್ಣನವರ ಕುರಿತಾದ ಪಠ್ಯವನ್ನು ತಿರುಚಲಾಗಿದೆ. ಅದನ್ನು ಕೂಡಲೇ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ ಎಂದು ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸ್ವಾಮೀಜಿ, ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯ ಕುರಿತು ಸಾಕಷ್ಟು ಆಕ್ಷೇಪ ಮತ್ತು ಆಪಾದನೆ ಕೇಳಿ ಬರುತ್ತಿವೆ. ಯಾವ ಹಂತದಲ್ಲಿ ಏನೇನು ಬದಲಾಯಿಸಿದ್ದಾರೆ, ಸೇರಿಸಿದ್ದಾರೆ ಎನ್ನುವುದನ್ನು ಗಮನಿಸೋಣ ಎಂದರೆ ಪಠ್ಯಪುಸ್ತಕಗಳೇ ಎಲ್ಲೂ ದೊರೆಯುತ್ತಿಲ್ಲ.
ಈಗಾಗಲೇ ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯಪುಸ್ತಕಗಳಿಲ್ಲ ಎಂದರೆ ಶಿಕ್ಷಕರು ಏನು ಪಾಠ ಮಾಡಬೇಕು?. ಈಗಿನ ಪಠ್ಯ ಸಮಿತಿಯಲ್ಲಿರುವವರು ಒಂದು ವರ್ಗಕ್ಕೆ ಸೇರಿದವರೆಂಬುದು ಮೇಲ್ನೋಟಕ್ಕೆ ಎದ್ದು ತೋರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯ ರಚನಾ ಸಮಿತಿಯಲ್ಲಿರಬೇಕಾದ್ದು, ಅಪೇಕ್ಷಣೀಯ. ಅಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಪ್ಪುಗಳ ಪಟ್ಟಿ: ವಾಟ್ಸ್ ಆ್ಯಪ್‌ನಲ್ಲಿ ನಾವು ನೋಡಿರುವಂತೆ 9ನೆಯ ತರಗತಿಯ 'ಸಮಾಜ ವಿಜ್ಞಾನ' ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ.
ಕಳೆದ ವರ್ಷದ ಪಾಠದಲ್ಲಿ 'ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರ ಪಡಿಸಿದರು.