ಬೆಂಗಳೂರು: ಕಳೆದ 9 ತಿಂಗಳಿಂದ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಶಿಶು ಮಂದಿರ ಸಂಸ್ಥೆ. ಆಪತ್ತಿಗಾದವನೇ ಆಪದ್ಬಾಂಧವ ಅನ್ನೋ ಮಾತಿನಂತೆ ಕೊರೊನಾ ಕಷ್ಟ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದಾಗ ಕೆ.ಆರ್. ಪುರದ ಭಟ್ಟರಹಳ್ಳಿಯಲ್ಲಿರುವ ಶಿಶುಮಂದಿರ ಸಂಸ್ಥೆ ಫುಡ್ ಕಿಟ್ಗಳನ್ನ ವಿತರಿಸಿ ಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುತ್ತಿದೆ.
ಶಿಶುಮಂದಿರ ಸಂಸ್ಥೆಯು ಕೊರೊನಾ ಲಾಕ್ಡೌನ್ನಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಿಂತು ಸಾವಿರಾರು ಕೂಲಿಕಾರ್ಮಿಕರಿಗೆ ರೇಷನ್ ಕಿಟ್ಗಳನ್ನು ನೀಡುತ್ತಾ ಬಂದಿದೆ. ಇವರ ಸಮಾಜ ಸೇವೆ ನೋಡಿ ಟೆಕ್ ಮಹೀಂದ್ರ ಸಂಸ್ಥೆ ಸುಮಾರು 20 ಲಕ್ಷ ರೂಪಾಯಿಯ ಅಕ್ಕಿ, ಗೋಧಿ, ಧಾನ್ಯ, ಎಣ್ಣೆಯನ್ನು ನೀಡಿತ್ತು. ಸೇವಾಮನೋಭಾವದಲ್ಲಿ ಪಡೆದ ಆಹಾರ ಪದಾರ್ಥಗಳನ್ನು ಶಿಶುಮಂದಿರ ಸಂಸ್ಥೆ ಬಡವರನ್ನು ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಇಂದು ವಿತರಿಸಿತು.
ಶಿಶುಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಕಳೆದ ಒಂದು ವಾರದಿಂದ ಕಿತ್ತಗನೂರು, ಕೆ.ಆರ್.ಪುರ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ಬೇರೆ ರಾಜ್ಯಗಳಿಂದ ವಲಸೆ ಬಂದು ಕಟ್ಟಡ ನಿರ್ಮಾಣ ಕೆಲಸ ಮಾಡುವ ನೂರಾರು ಕಡು ಬಡವರನ್ನು ಗುರುತಿಸಿ ಅವರ ಆಧಾರ್ ಕಾರ್ಡ್ ಮಾಹಿತಿ ಪಡೆದು ಮೊದಲೇ ಚೀಟಿ ನೀಡಿತ್ತು. ಆಧಾರ್ ಕಾರ್ಡ್ ಮತ್ತು ಸಂಸ್ಥೆ ನೀಡಿದ್ದ ಚೀಟಿ ತೋರಿಸಿದವರಿಗೆ ಮಾತ್ರ ಫುಡ್ ಕಿಟ್ ವಿತರಿಸಲಾಯಿತು.