ಬೆಂಗಳೂರು:ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾರನ್ನು ಭೇಟಿಯಾಗಿ ಚರ್ಚಿಸಿದರು.
ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕ ಚರ್ಚೆ ನಡೆಸಿರುವ ಕೈ ಉಸ್ತುವಾರಿ, ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಮುಖಂಡರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಂದು ಮಧ್ಯಾಹ್ನ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ನಿವಾಸಕ್ಕೆ ಭೋಜನಕ್ಕೆ ತೆರಳಿದ್ದವರು. ವಾಪಸಾದ ಬಳಿಕ ಮತ್ತಷ್ಟು ಮುಖಂಡರ ಜೊತೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಕೂಡ ಅವರನ್ನು ಭೇಟಿಯಾಗಿ ಚರ್ಚಿಸಿದರು. ಕಾಂಗ್ರೆಸ್ ಸೇರ್ಪಡೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಇದೇ ತಿಂಗಳ ಮೂರನೇ ವಾರ ಶರತ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲಾರನ್ನ ಭೇಟಿಯಾದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ 'ಕೈ' ಹಿಡಿಯುವುದು ಖಚಿತ
ಸುರ್ಜೆವಾಲಾ ಭೇಟಿ ನಂತರ ಮಾತನಾಡಿದ ಶರತ್ ಬಚ್ಚೇಗೌಡ, ಕಾಂಗ್ರೆಸ್ ಸೇರುವುದು ಖಚಿತ. ನಾನು ಇವತ್ತು ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ್ದೇನೆ. ಪ್ರಸ್ತುತ ಎಂಪಿಎಂಸಿ ಹಾಗೂ ರೈತ ವಿರೋಧಿ ಕಾಯಿದೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನು ಕಾಂಗ್ರೆಸ್ ಸೇರ್ಪಡೆ ಆಗುವ ಸಂಬಂಧ ಚರ್ಚೆಯಾಗಿದೆ, ಆದರೆ ದಿನಾಂಕ ನಿಗದಿಯಾಗಿಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.
ಸದ್ಯಕ್ಕೆ ಸಮಾವೇಶ ನಡೆಸುವ ಪ್ಲ್ಯಾನ್ ಇಲ್ಲ. ಅಧಿಕೃತವಾಗಿ ಕಾಂಗ್ರೆಸ್ ಬಾವುಟ ಹಿಡಿದ ನಂತರದಲ್ಲಿ ಪ್ಲ್ಯಾನ್ ಮಾಡ್ತೇವೆ. ಯಾವುದೇ ಷರತ್ತು ಹಾಕಿ ಕಾಂಗ್ರೆಸ್ ಸೇರುತ್ತಿಲ್ಲ ಎಂದು ವಿವರಿಸಿದರು. ಅಲ್ಲದೆ, ರಾಷ್ಟ್ರ, ರಾಜ್ಯದ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ ಸುಧಾರಣೆಗೆ ಏನು ಮಾಡಬಹುದೆಂಬ ಮಾಹಿತಿ ವಿವರಿಸಿದ್ದೇನೆ. ಅವರು ಯಂಗ್ ಬ್ಲಡ್ ರಾಜಕೀಯಕ್ಕೆ ಬರಬೇಕು ಎಂದಿದ್ದಾರೆ ಎಂದು ತಿಳಿಸಿದರು.