ಕರ್ನಾಟಕ

karnataka

ETV Bharat / city

ಫ್ಲೈಟ್​​ನಲ್ಲಿ ಬಂದು ಬೆಂಗಳೂರಿನ ವಿವಿಧೆಡೆ ಕಳ್ಳತನ : ಶ್ಯಾಮಿಲಿ ಗ್ಯಾಂಗ್​ನ ಇಬ್ಬರು ಸರಗಳ್ಳರ ಬಂಧನ - Bangalore

ಕದ್ದ ಬೈಕ್​​ಗಳ ಮೂಲಕ ನಗರದ ಹೊರವಲಯದಲ್ಲಿ ಸರಗಳ್ಳತನ ಮಾಡುತ್ತಿದ್ದರು. ಕೃತ್ಯದ ಬಳಿಕ ರೈಲು, ವಿಮಾನ ನಿಲ್ದಾಣ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಬೈಕ್ ನಿಲ್ಲಿಸುತ್ತಿದ್ದರು. ಕದ್ದ ಚಿನ್ನಾಭರಣ ಇಟ್ಟುಕೊಂಡು ವಿಮಾನದಲ್ಲಿ ಹೋದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುವ ಆತಂಕದಿಂದ ರೈಲಿನ‌ ಮೂಲಕ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ಗೋವಾ, ಬಾಂಬೆ ಸೇರಿದಂತೆ ವಿವಿಧ ಕಡೆಗಳಿಗೆ ಹೋಗಿ ಮೋಜು, ಮಸ್ತಿ ಮಾಡುತ್ತಿದ್ದರು..

Bangalore
ಬೆಂಗಳೂರು

By

Published : Jul 30, 2021, 7:50 PM IST

ಬೆಂಗಳೂರು :ಪಂಜಾಬಿನ‌ ಲೂಧಿಯಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ನಗರದ ಹೊರವಲಯದಲ್ಲಿ ಎರಡು ದಿನಗಳ ಅಂತರದಲ್ಲಿ 11ಕ್ಕೂ ಹೆಚ್ಚು ಸರಗಳ್ಳತನ ಮಾಡಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ಉತ್ತರ ಭಾರತದ ಮೂಲದ ಶ್ಯಾಮಿಲಿ ಗ್ಯಾಂಗ್​ನ ಇಬ್ಬರು ಸರಗಳ್ಳರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಲೂಧಿಯಾನ ಮೂಲದ ಅರ್ಜುನ್ ಕುಮಾರ್ ಹಾಗೂ ರಾಕೇಶ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸುಭಾಷ್ ಕುಮಾರ್, ಸಂಜಯ್, ಚಗಲ್ ಲಾಲ್ ಹಾಗೂ ಸೋನುಕುಮಾರ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.

ಶ್ಯಾಮಿಲಿ ಗ್ಯಾಂಗ್​ನ ಇಬ್ಬರು ಸರಗಳ್ಳರ ಬಂಧನ..

ಕಳೆದ‌ ಜೂನ್‌ 28ರಿಂದ ಮೂರು ದಿನಗಳ ಕಾಲ ಬೆಂಗಳೂರು ಹೊರವಲಯದ ಸರ್ಜಾಪುರ, ಹೆಬ್ಬಗೋಡಿ, ಹೊಸಕೋಟೆ, ಅನುಗೊಂಡನಹಳ್ಳಿ, ತಿರುಮಲಶೆಟ್ಟಿ, ಸೂಲಿಬೆಲೆ, ದೊಡ್ಡಬಳ್ಳಾಪುರ, ಆವಲಹಳ್ಳಿ ಹಾಗೂ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಗಳಲ್ಲಿ ಕದ್ದ ಬೈಕ್​ಗಳ‌ ಮುಖಾಂತರ 11 ಕಡೆ ಸರಗಳ್ಳತನ ಮಾಡಿದ್ದರು.

ಒಂಟಿ ಮಹಿಳೆ, ವೃದ್ದೆಯರನ್ನು ಗುರಿಯಾಗಿಸಿ ವಿಳಾಸ ಕೇಳುವ ನೆಪದಲ್ಲಿ, ನೀರು ಕೇಳುವ ಹಾಗೂ ಅಂಗಡಿಗಳಲ್ಲಿ ವಸ್ತು ಖರೀದಿಸುವ ಸೋಗಿನಲ್ಲಿ ಸರಗಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು‌. ಈ ಸಂಬಂಧ ಗ್ರಾಮಾಂತರ ವಿಭಾಗದ ಎಸ್​ಪಿ ಕೋನ ವಂಶಿಕೃಷ್ಣ, ಹೊಸಕೋಟೆ ಉಪವಿಭಾಗದ ಡಿವೈಎಸ್​ಪಿ ಹೆಚ್ ಎಂ ಉಮಾಶಂಕರ್ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್​ಪಿ ರಂಗಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ‌.

ಬರುವಾಗ ಫ್ಲೈಟ್​ ಹೋಗುವಾಗ ರೈಲು :ಬಂಧಿತ ಆರೋಪಿಗಳು ಊರಿನಲ್ಲಿ ಸಣ್ಣಪುಟ್ಟ ಕೆಲಸ‌ ಮಾಡುತ್ತಿದ್ದು, ಅಕ್ರಮ ಹಣ ಸಂಪಾದನೆಗಾಗಿ ಕಳ್ಳತನಕ್ಕೆ ಇಳಿದಿದ್ದರು. ಲೂಧಿಯಾನದಿಂದ ದೆಹಲಿಗೆ ಬಸ್​​ನಲ್ಲಿ ಹೋಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಸ್ಥಳೀಯ ಕ್ಯಾಬ್ ಬಳಸಿ ಸರ್ಜಾಪುರದ ದೊಮ್ಮಸಂದ್ರ ಬಳಿ ಸ್ನೇಹಿತನ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು.

ಕದ್ದ ಬೈಕ್​​ಗಳ ಮೂಲಕ ನಗರದ ಹೊರವಲಯದಲ್ಲಿ ಸರಗಳ್ಳತನ ಮಾಡುತ್ತಿದ್ದರು. ಕೃತ್ಯದ ಬಳಿಕ ರೈಲು, ವಿಮಾನ ನಿಲ್ದಾಣ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಬೈಕ್ ನಿಲ್ಲಿಸುತ್ತಿದ್ದರು. ಕದ್ದ ಚಿನ್ನಾಭರಣ ಇಟ್ಟುಕೊಂಡು ವಿಮಾನದಲ್ಲಿ ಹೋದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುವ ಆತಂಕದಿಂದ ರೈಲಿನ‌ ಮೂಲಕ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ಗೋವಾ, ಬಾಂಬೆ ಸೇರಿದಂತೆ ವಿವಿಧ ಕಡೆಗಳಿಗೆ ಹೋಗಿ ಮೋಜು, ಮಸ್ತಿ ಮಾಡುತ್ತಿದ್ದರು.

ತಮಿಳುನಾಡಿನಲ್ಲಿ 25ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿ :2014ರಲ್ಲಿ ಆರೋಪಿಗಳು ತಮಿಳನಾಡಿನ ಸೇಲಂ, ಕೃಷ್ಣಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ಕಾಯ್ದೆಯಡಿ ಆರು ತಿಂಗಳ‌ ಕಾಲ ಜೈಲುವಾಸ ಅನುಭವಿಸಿದ್ದರು.

ಕಳೆದ ವರ್ಷ ಜಾಮೀನಿನ‌ ಮೇಲೆ ಹೊರ ಬಂದು ರಾಜಾಜಿನಗರ, ಕಾಮಾಕ್ಷಿಪಾಳ್ಯ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಯಲಹಂಕ ಪೊಲೀಸರಿಂದ ಬಂಧಿತರಾಗಿ ಮತ್ತೆ ಜಾಮೀನು ಪಡೆದು ಹೊರ ಬಂದಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, 450 ಗ್ರಾಂ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೃತ್ಯ ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಚಂದ್ರಶೇಖರ್ ₹50 ಸಾವಿರ ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ:ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಯನ್ನಾಗಿ ಪರಿವರ್ತಿಸುತ್ತಿದ್ದ ಕೇರಳದ ಟೆಕ್ಕಿ ಬಂಧನ

ABOUT THE AUTHOR

...view details