ಬೆಂಗಳೂರು: ಕೊರೊನಾ ಓಡಿಸಲು ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯಕರ ವಾತಾವರಣ ಸೃಷ್ಟಿಸಬೇಕು. ಗಾಳಿಯ ಮೂಲಕ, ಚರಂಡಿ ನೀರು ಮತ್ತು ತ್ಯಾಜ್ಯದಿಂದ ಕೊರೊನಾ ಹರಡುತ್ತದೆ ಎಂದು ಈಗಾಗಲೇ ಕೆಲ ಅಧ್ಯಯನಗಳು ಹೇಳಿವೆ. ಹಾಗಾದರೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹರಡಂತೆ ತಡೆಯಲು ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ ಒಳಚರಂಡಿಗಳ ಸ್ಥಿತಿಗತಿ ಹೇಗಿದೆ?
ಒಡೆದಿರುವ ಚರಂಡಿಗಳಿಂದ ಕೊಳಚೆ ನೀರು ಮನೆಗೆ ನುಗ್ಗುತ್ತೆ, ರೋಡಲ್ಲೆಲ್ಲ ಬರೀ ನೀರೇ ಇರುತ್ತೆ. ಓಡಾಡಲು ಕಿರಿಕಿರಿಯಾಗ್ತಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗ್ತಿದೆ ಎಂದು ಸಾರ್ವಜನಿಕರು ದೂರುವುದು ಕಾಮನ್.. ಒಳಚರಂಡಿಗಳ ಅವ್ಯವಸ್ಥೆಯಿಂದ ಕೊರೊನಾ ಜೊತೆಗೆ ಡೆಂಘಿ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಮಾರಕ ವ್ಯಾಧಿಗಳು ಅಂಟಿಕೊಂಡರೂ ಅಚ್ಚರಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಮಾತೆತ್ತಿದರೆ ಸ್ವಚ್ಛತೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎನ್ನುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳು ಏನ್ ಮಾಡ್ತಿವೆ ಎಂದು ಪ್ರಶ್ನಿಸಿದ್ದಾರೆ. ಕೆರೆಗೆ ಕೊಳಚೆ ಬಿಡಬಾರದು ಎಂದಿದ್ದರೂ ರಾಯಚೂರಿನ 31 ವಾರ್ಡ್ಗಳ ಚರಂಡಿಯ ನೀರು ಮಂಚಾಲಪುರ ಗ್ರಾಮದ ಕೆರೆಗೆ ಸೇರುತ್ತಿದೆ. ಅದನ್ನು ತಡೆಯಲು ಅಧಿಕಾರಿ ವರ್ಗ ಕೈಕಟ್ಟಿ ಕೂತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕೊರೊನಾ ಕಾರಣ ಒಳಚರಂಡಿಗಳ ಕಾಮಗಾರಿ ಸ್ಥಗಿತಗೊಂಡಿತ್ತು. ಹೀಗಾಗಿ, ಎಷ್ಟೋ ಕಡೆ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯತ್ತಿದೆ. ಇನ್ನು ಮಳೆ ಬಂದರೆ ಅದರ ಶೋಚನೀಯ ಸ್ಥಿತಿ ಹೇಳುವುದೇ ಬೇಡ. ಚರಂಡಿ ನೀರು ಹರಿಯುವ ಜಾಗದಲ್ಲಿ ಬ್ಲೀಚಿಂಗ್ ಪೌಡರ್, ಸ್ಯಾನಿಟೈಸರ್ ಸಿಂಪಡಿಸುವ ಆದೇಶವಿದೆ. ಆದರೆ, ಅದು ಕಾಗದಕ್ಕೆ ಸೀಮಿತವಾಗಿದೆ. ಇದಲ್ಲದೇ, ತುಮಕೂರು ನಗರದಲ್ಲಿ ಪಾಲಿಕೆಯು ಒಳಚರಂಡಿ ವ್ಯವಸ್ಥೆಯ ಪಿಟ್ಗಳಲ್ಲಿನ ಕೊಳಚೆ ಸೋರಿಕೆ ತಡೆಗಟ್ಟಲು ಹರಸಾಹಸ ಪಡುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಕೊಳಚೆ ನೀರು ರಾಜಕಾಲುವೆ, ಕೆರೆಗಳಿಗೆ ಸೇರದಂತೆ ಕ್ರಮ ಕೈಗೊಳ್ಳಲು ಜಲಮಂಡಳಿ ಮತ್ತು ಬಿಬಿಎಂಪಿ ವಿಫಲವಾಗಿವೆ. ಸದ್ಯ 29 ಎಸ್ಟಿಪಿಗಳು ಕೆಲಸ ಮಾಡುತ್ತಿದ್ದರೂ ಅರ್ಧದಷ್ಟೂ ಕೊಳಚೆ ನೀರು ಸಂಸ್ಕರಣೆಯಾಗುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ಹೊಸ ಎಸ್ಟಿಪಿಗಳ ನಿರ್ಮಾಣ ಕಾರ್ಯ ವೇಗ ಪಡೆಯುತ್ತಿಲ್ಲ. ಬೆಂಗಳೂರಿನಲ್ಲಿ ನಿತ್ಯ ಶೇ.80ರಷ್ಟು ಅಂದರೆ 1,440 ಎಂಎಲ್ಡಿ ಚರಂಡಿ ನೀರು ಉತ್ಪತ್ತಿಯಾಗುತ್ತಿದೆ. ಆದರೆ, 850 ಎಮ್ಎಲ್ಡಿ ತ್ಯಾಜ್ಯ ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ. ಅಧಿಕಾರಿಗಳು ಎಚ್ಚರಗೊಳ್ಳದಿದ್ದರೆ ಮತ್ತು ಕಾಮಗಾರಿಗಳು ವೇಗ ಪಡೆದುಕೊಳ್ಳದಿದ್ದರೆ, ಜನರು ನಾನಾ ತೊಂದರೆ ಅನುಭವಿಸುವುದಂತೂ ಖಚಿತ.