ಬೆಂಗಳೂರು: ಈಗಾಗಲೇ ಸಚಿವ ಎಸ್.ಟಿ.ಸೋಮಶೇಖರ್ ಪ್ರಧಾನಿ ಮೋದಿ ಭೇಟಿಗೆ ಕಾಲಾವಕಾಶವನ್ನು ಕೋರಿದ್ದಾರೆ. ಸಮಯ ಕೊಟ್ಟ ಕೂಡಲೇ ನಾವು ಏಳೆಂಟು ಸಚಿವರು ಒಟ್ಟಿಗೆ ದೆಹಲಿಗೆ ಭೇಟಿ ನೀಡಲಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ದೆಹಲಿ ಪ್ರವಾಸದ ಕುರಿತು ಸಚಿವ ಬಿ. ಸಿ. ಪಾಟೀಲ್ ಹೇಳಿಕೆ ವಿಕಾಸಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ನೂತನ ಕೇಂದ್ರ ಸಚಿವರನ್ನೂ ಸಹ ಭೇಟಿಯಾಗಿ ಚರ್ಚೆ ನಡೆಸಲಿದ್ದೇವೆ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವುದು ಬೇಡ ಎಂದು ಸ್ಪಷ್ಟಪಡಿಸಿದರು.
'ಡಿಕೆಶಿ ಕನಸು ಕಾಣುತ್ತಿದ್ದಾರೆ'
17 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ವಾಪಸ್ ಬರಬಹುದು ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಡಿಕೆಶಿ ಕನಸು ಕಾಣುತ್ತಿದ್ದಾರೆ. ಅವರ ಕನಸು ಈಡೇರಲ್ಲ. ಈಗ ಕಾಂಗ್ರೆಸ್ನವರ ಅರ್ಜಿ ಸೇಲ್ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅವರ ತಟ್ಟೆಯಲ್ಲೇ ಕತ್ತೆ ಸತ್ತು ಬಿದ್ದಿದೆ, ಅದನ್ನು ನೋಡೋದು ಬಿಟ್ಟು ನಮ್ಮ ತಟ್ಟೆಯಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಮುಂದಾಗಿದ್ದಾರೆ. ಮೊದಲು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಕಿತ್ತಾಟ ಸರಿ ಮಾಡಿಕೊಳ್ಳಲಿ. ನಾವು ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದರು.
ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರು, ರಾಘವೇಂದ್ರ ಸಂಸದರು. ಅದಕ್ಕಾಗಿ ಅವರು ಸಿಎಂ ಜೊತೆ ಹೋಗಿದ್ದಾರೆ. ಸಿಎಂಗೆ ಎಲ್ಲ ಇಲಾಖೆಗಳ ಮಾಹಿತಿ ಕೂಡ ಇದೆ. ಸಾಕಷ್ಟು ಬಾರಿ ಅವರು ನಮ್ಮ ಜೊತೆಗೆ ಸಭೆಗಳನ್ನು ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಎಲ್ಲವನ್ನು ತಿಳಿದುಕೊಂಡೇ ದೆಹಲಿಗೆ ಹೋಗಿದ್ದಾರೆ ಎಂದರು.