ಬೆಂಗಳೂರು: ಅರಣ್ಯ ಸಚಿವ ಆನಂದ್ ಸಿಂಗ್ ಅವರು ಮುದ್ರಿತ ಪ್ರತಿ ಬದಲಾಗಿ ಪ್ರಶ್ನೆ ಕೇಳಿದವರಿಗೆ ಮಾತ್ರ ಸಿಡಿ ನೀಡಿದ ಕಾರಣ ವಿಪಕ್ಷ ನಾಯಕರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ನ ಪಿ.ಆರ್ ರಮೇಶ್, ಬೆಂಗಳೂರಿನಲ್ಲಿ ಪರಿಸರ ಹಾನಿ ಉಂಟುಮಾಡುತ್ತಿರುವ ಕಾರ್ಖಾನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಆನಂದ್ ಸಿಂಗ್, ಉತ್ತರವನ್ನು 500ಕ್ಕೂ ಹೆಚ್ಚು ಪುಟದ ದಾಖಲೆಗಳನ್ನು ಒಳಗೊಂಡ ಕಡತದ ಮೂಲಕ ಸದನಕ್ಕೆ ಸಲ್ಲಿಕೆ ಮಾಡಿದರು. ಸದಸ್ಯರಿಗೆ ಮುದ್ರಿತ ಪ್ರತಿ ನೀಡದೆ ಕೇವಲ ಪ್ರಶ್ನೆ ಕೇಳಿದ್ದ ರಮೇಶ್ ಅವರಿಗೆ ಮಾತ್ರ ಸಿ.ಡಿ ಮೂಲಕ ಉತ್ತರವನ್ನು ನೀಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸದಸ್ಯರಿಗಷ್ಟೇ ಅನುಬಂಧ ಒದಗಿಸಿ, ಉತ್ತರ ಒದಗಿಸಿ, ಇತರ ಸದಸ್ಯರಿಗೆ ನೀಡದೆ ಇದ್ದದ್ದು ಇತಿಹಾಸದಲ್ಲಿ ಆಗಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು. ಇದು ಒಳ್ಳೆಯ ಸಂಪ್ರದಾಯ ಅಲ್ಲ ಎಂದು ಕಿಡಿಕಾರಿದರು.