ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಒಡೆತನದ ಆರ್.ಆರ್.ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ ಮುಖಾಂತರ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. Huchaswamyvenkat96@gmail.com ಅನ್ನೋ ಮೇಲ್ ಐಡಿಯಿಂದ ಬೆದರಿಕೆ ಪತ್ರ ಬಂದಿದ್ದು, ಪೊಲೀಸರಲ್ಲೂ ಗೊಂದಲ ಮೂಡಿಸಿದೆ. ಶಾಲಾ ಆಡಳಿತ ಮಂಡಳಿಯ ಇ-ಮೇಲ್ಗೆ ಬಾಂಬ್ ಇಟ್ಟಿರುವುದಾಗಿ ನಿನ್ನೆ ರಾತ್ರಿಯೇ ಸಂದೇಶ ಕಳುಹಿಸಿದ್ದಾರೆ. ಭಾನುವಾರವಾದ ಕಾರಣ ಯಾರೂ ಗಮನಿಸಿರಲಿಲ್ಲ. ಇಂದು ಶಾಲೆಗೆ ಆಗಮಿಸಿದಾಗ ಆಡಳಿತ ಮಂಡಳಿ ಪರಿಶೀಲಿಸಿ ಆರ್.ಆರ್.ನಗರ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ತಪಾಸಣೆ ನಡೆಸುತ್ತಿದೆ.
ಆರ್.ಆರ್.ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ಗೆ ಬೆದರಿಕೆ ಮೇಲ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಸುಮಾರು 1,500ಕ್ಕೂ ಹೆಚ್ಚು ಮಕ್ಕಳನ್ನು ಯೂನಿಟ್ 1 ರಿಂದ ಯೂನಿಟ್ 2ಗೆ ಶಿಫ್ಟ್ ಮಾಡಲಾಗಿದೆ. ಬಾಂಬ್ ಬೆದರಿಕೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ದೌಡಾಯಿಸಿ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, "ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ತಕ್ಷಣ ಪೊಲೀಸರನ್ನು ಸಂಪರ್ಕಿಸಿದೆ. ಶಾಲೆಯ ಆವರಣವನ್ನು ಖಾಲಿ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸುತ್ತಿದೆ. ನನ್ನ ಪ್ರಕಾರ ಇದೊಂದು ಹುಸಿ ಕರೆ" ಎಂದರು.