ಬೆಂಗಳೂರು : ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ಧೆ-2007ರ ಸೆಕ್ಷನ್ 23(1)ರ ನಿಬಂಧನೆಗಳು ಕಾಯ್ದೆ ಆರಂಭವಾದ ನಂತರವಷ್ಟೇ ಅನ್ವಯಿಸುತ್ತವೆಯೇ ಹೊರತು ಪೂರ್ವಾನ್ವಯ ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಗಳಿಗೆ ನೀಡಿದ್ದ ಗಿಫ್ಟ್ ಡೀಡ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ತುಮಕೂರಿನ ಕಮಲಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸುವ ವೇಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆಯನ್ನು 2007ರಲ್ಲಿ ಜಾರಿಗೆ ತರಲಾಗಿದೆ. ಹೀಗಾಗಿ, 2005ರಲ್ಲಿ ಮಾಡಿರುವ ಗಿಫ್ಟ್ ಡೀಡ್ ವ್ಯವಹಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿದೆ.
ಪ್ರಕರಣದ ಹಿನ್ನೆಲೆ :ತುಮಕೂರಿನ ಕಮಲಮ್ಮ ತನ್ನ ಮಗಳು ನಾಗಲಕ್ಷ್ಮಿ ಎಂಬುವರಿಗೆ 2005ರ ಆಗಸ್ಟ್ 22ರಂದು ಕೆಲ ಸ್ಥಿರಾಸ್ತಿಯನ್ನು ಉಡುಗೊರೆಯಾಗಿ ವರ್ಗಾವಣೆ ಮಾಡಿ ಕೊಟ್ಟಿದ್ದರು. ಈ ಆಸ್ತಿಯನ್ನು ನಾಗಲಕ್ಷ್ಮಿ 2014ರ ಆಗಸ್ಟ್‌ನಲ್ಲಿ ಗೋಪಾಲ್ ಎಂಬುವರಿಗೆ ಮಾರಾಟ ಮಾಡಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಕಮಲಮ್ಮ ಗಿಫ್ಟ್ ಡೀಡ್ ಹಾಗೂ ಮಾರಾಟ ರದ್ದುಪಡಿಸುವಂತೆ ಕೋರಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಎಸಿ ಗಿಫ್ಟ್ ಡೀಡ್ ಹಾಗೂ ಮಾರಾಟ ರದ್ದುಪಡಿಸಿ ಆದೇಶಿಸಿದ್ದರು.
ಎಸಿ ಆದೇಶ ಪ್ರಶ್ನಿಸಿ ಗೋಪಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣವನ್ನು 6 ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಸಿವಿಲ್ ಕೋರ್ಟ್‌ಗೆ ನಿರ್ದೇಶಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕಮಲಮ್ಮ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಅರ್ಜಿದಾರರು 2005ರಲ್ಲಿ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದಾರೆ. ಹಿರಿಯ ನಾಗರಿಕರ ಕಾಯ್ದೆ ಜಾರಿಗೆ ಬಂದಿರುವುದು 2007ರಲ್ಲಿ. ಹೀಗಾಗಿ, ಅರ್ಜಿದಾರರು 2007ರ ಕಾಯ್ದೆಯ ನಿಬಂಧನೆಗಳ ಅನುಸಾರ ಪರಿಹಾರ ಕೇಳಲಾಗದು. ಕಾಯ್ದೆಯು ಜಾರಿಯಾದ ನಂತರದ ಪ್ರಕರಣಗಳಿಗೆ ಅನ್ವಯಿಸುತ್ತದೆಯೇ ಹೊರತು ಪೂರ್ನಾನ್ವಯ ಆಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದ್ದಾರೆ.
ಇದನ್ನೂ ಓದಿ:ಮಕ್ಕಳ ದತ್ತು ಸ್ವೀಕಾರಕ್ಕೆ ಕರಡು ನಿಯಮ ಸಿದ್ದ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ