ಬೆಂಗಳೂರು: ಬೆಂಗಳೂರು - ಹೊಸೂರು ರಸ್ತೆಯ ಬೊಮ್ಮನಹಳ್ಳಿ ಖಾಸಗಿ ಕಂಪನಿಯ ಆವರಣದ ಪಕ್ಕದ ಖಾಲಿಜಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತನನ್ನು ಮೂಲತಃ ಮಡಿಕೇರಿಯ ಕಟ್ಲು ನಿವಾಸಿ (28) ಜಗನ್ ಎಂದು ಗುರುತಿಸಲಾಗಿದೆ. ಬೊಮ್ಮನಹಳ್ಳಿಯ ಖಾಸಗಿ ಕಂಪನಿಯಲ್ಲಿ ಸ್ಟಾರ್ ಏಜೆನ್ಸಿ ಎಂಬ ಸೆಕ್ಯೂರಿಟಿ ಸಂಸ್ಥೆ ಮೂಲಕ ಆರ್ಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ತನ್ನದೇ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಗಾರ್ಡ್ ಶವ ಪತ್ತೆ ರಾತ್ರಿ ಪಾಳಿಯಲ್ಲಿ ಒಟ್ಟು 4 ಜನ ಆರ್ಮ್ ಗಾರ್ಡಗಳು ಕರ್ತವ್ಯದಲ್ಲಿದ್ದರು. ಇವರ ನಡುವೆ ಇದ್ದ ಜಗನ್ ಮಾತ್ರ ಬೆಳಗಿನ ಜಾವ 3.30 ರಿಂದ 4 ಗಂಟೆಯ ನಡುವೆ ಕಾಣೆಯಾಗಿದ್ದ. ಜೊತೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳು ಹುಡುಕಾಟ ನಡೆಸಿದರೂ ಜಗನ್ ಸಿಕ್ಕಿರಲಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಕಂಪನಿಯ ಆವರಣದ ಪಕ್ಕದ ಖಾಲಿ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶೂ ಜರ್ಕಿನ್ ಬಿದ್ದಿರುವ ಜಾಗದಿಂದ 50 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಎರಡು ಕೈ ಎದೆ ಮೇಲಿದ್ರೆ ಸಿಂಗಲ್ ಬ್ಯಾರಲ್ ಗನ್ ದೇಹದ ಮೇಲೆಯೇ ಇದೆ. ಸೂಸೈಡ್ ಮಾಡಿಕೊಂಡ್ರೆ ಈ ರೀತಿ ಇರೋದಿಲ್ಲ, ಒದ್ದಾಡ್ತಾರೆ. ಆದ್ರೆ ಬಂದೂಕು ಎದೆಯ ಮೇಲೆಯೇ ಇರೋದಕ್ಕೆ ಹೇಗೆ ಸಾಧ್ಯ ಎಂದು ಸಹೋದ್ಯೋಗಿ ರಾಜೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.