ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರೊಂದಿಗೆ ಡಿಸಿಎಂ ಮಹತ್ವದ ಚರ್ಚೆ ನಡೆಸಿದರು.
100 ಕಾಲೇಜುಗಳಲ್ಲಿ ಅವಕಾಶ: ರಾಜ್ಯದಲ್ಲಿ ಒಟ್ಟು 220 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು.