ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನಾರಂಭವಾಗಲಿವೆ. ಜೊತೆ ಜೊತೆಗೆ ಕಲಿಕಾ ಚೇತರಿಕೆಯ ವಿಶೇಷ ಕಾರ್ಯಕ್ರಮವೂ ಶುರುವಾಗಲಿದೆ. ರಾಜ್ಯದ ಪಠ್ಯಕ್ರಮ ಹೊಂದಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022-23ನೇ ಸಾಲಿನ ಶೈಕ್ಷಣಿಕ ವರ್ಷ ನಾಳೆಯಿಂದ ಆರಂಭವಾಗಲಿದೆ.
ಕಳೆದ 3 ವರ್ಷಗಳ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿದರೆ ಈ ಹಿಂದೆ ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ಅನಿವಾರ್ಯವಾಗಿ 2020-21ರ ಫೆಬ್ರವರಿಯಿಂದ ರಜೆ ನೀಡುವ ಸಂದರ್ಭ ಒದಗಿ ಬಂದಿತ್ತು. 2019-20, 2020-21 ಮತ್ತು 2021-22ರ ಈ ಮೂರು ಶೈಕ್ಷಣಿಕ ಸಾಲುಗಳಲ್ಲಿ ಆಗಿಂದಾಗ್ಗೆ ರಾಜ್ಯದ ಶಾಲೆಗಳನ್ನು ಸ್ಥಗಿತಗೊಳಿಸಿದ್ದ ಕಾರಣ ಶೇ.50 ರಿಂದ 60ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲೆಗಳನ್ನು ನಡೆಸಲಾಗಿತ್ತು.
ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಉಂಟಾಗಿತ್ತು. ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗದೇ ಪರ್ಯಾಯ ಮಾರ್ಗಗಳ ಮುಖಾಂತರ ಆನ್ಲೈನ್ ಮೂಲಕ ಶಿಕ್ಷಣವನ್ನು ನೀಡಬೇಕಾಯ್ತು. ಆದರೆ, ಈ ಪರ್ಯಾಯ ವಿಧಾನದಿಂದ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಸಾಧಿಸಲು ಆಗಿಲ್ಲ ಅಂತಾ ಶಿಕ್ಷಣ ಇಲಾಖೆ ತಿಳಿಸಿತ್ತು.
ಕಲಿಕಾ ಚೇತರಿಕೆ ಕಾರ್ಯಕ್ರಮ :ಈ ನಿಟ್ಟಿನಲ್ಲಿ ಮಕ್ಕಳು ಮರೆತಿರುವುದನ್ನು ಕಲಿಸುವ ಪ್ರಯತ್ನದ ಭಾಗವಾಗಿ ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನ ನಾಳೆಯಿಂದ ಶುರು ಮಾಡಲಾಗುತ್ತಿದೆ. ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪ್ರಸ್ತುತ ಸಾಲಿನ ಪಠ್ಯ ವಸ್ತುವಿನ ಬೋಧನೆಗೆ ಹಿನ್ನಡೆಯಾಗದಂತೆ ಸಹಕಾರಿಯಾಗುವಂತೆ ಆಯೋಜಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಮುಂದುವರೆದು ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.