ಬೆಂಗಳೂರು: ಕೊರೊನಾ ಸೋಂಕಿನಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದು ಶಾಲಾ-ಕಾಲೇಜು ಮಕ್ಕಳು. ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸಲು ಲಾಕ್ಡೌನ್ ಅಸ್ತ್ರ ಪ್ರಯೋಗ ಮಾಡಿದಾಗ ಆರ್ಥಿಕ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಆನಂತರ ತುಂಬಾ ಪರಿಣಾಮ ಬೀರಿದ್ದು ಶಾಲಾ ಮಕ್ಕಳ ಮೇಲೆ.
ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ಶಾಲೆಗೆ ಹೋಗದೆ ಮಕ್ಕಳು ಮಾನಸಿಕವಾಗಿ ಸಹ ತೊಂದರೆ ಅನುಭವಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲಾ ವಾತಾವರಣ ಬಹುಮುಖ್ಯವಾಗಿತ್ತು. ಆದರೆ, ಕೋವಿಡ್ನಿಂದಾಗಿ ಆಗೊಮ್ಮೆ, ಈಗೊಮ್ಮೆ ಶಾಲೆಯ ಕದ ತಟ್ಟಿದ್ದು ಬಿಟ್ಟರೆ, ಮನೆಯಲ್ಲಿ ಆನ್ಲೈನ್ ಪಾಠವೇ ಅಭ್ಯಾಸವಾಗಿತ್ತು.
ಮೂರನೇ ಅಲೆಯಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆ. ನಾಲ್ಕನೇ ಅಲೆ ಭೀತಿ ಇದ್ದರೂ ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಸೋಂಕಿತರ ಸಂಖ್ಯೆ ಇದೆ. ಇತ್ತ ಕೋವಿಡ್ ಕಾರಣಕ್ಕೆ ಮಕ್ಕಳ ಕಲಿಕೆಯ ಹಿನ್ನಡೆ ಸರಿದೂಗಿಸಲು 15 ದಿನ ಮುಂಚಿತವಾಗಿಯೇ ಶಾಲೆಯನ್ನ ಆರಂಭಿಸಲಾಗಿದೆ. ಬೇಸಿಗೆ ರಜೆ ಮುಗಿಸಿರುವ ಚಿಣ್ಣರು ಇಂದು ಶಾಲೆಯ ಬಾಗಿಲು ತಟ್ಟಿದ್ದಾರೆ. ರಾಜ್ಯದ ಪಠ್ಯಕ್ರಮ ಹೊಂದಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ.