ಬೆಂಗಳೂರು: ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷ ಪುನಾರಂಭಕ್ಕೆ ಇದೇ ಮೇ 16ಕ್ಕೆ ದಿನಾಂಕ ನಿಗದಿ ಮಾಡಿದೆ. ಆದರೆ, ಇದಕ್ಕೆ ಪೋಷಕರ ವರ್ಗ ವಿರೋಧ ವ್ಯಕ್ತಪಡಿಸಿದೆ. ಕಾರಣ ಕೋವಿಡ್ ನಾಲ್ಕನೇ ಅಲೆ ಭೀತಿ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದ್ದು, ಪ್ರವೇಶ ಶುಲ್ಕ, ಸಮವಸ್ತ್ರ ಖರೀದಿಸಿದ ಮೇಲೆ ಲಾಕ್ಡೌನ್ ಘೋಷಣೆ ಮಾಡಿ ಬಳಿಕ ಆನ್ಲೈನ್ ಶಿಕ್ಷಣ ಆರಂಭಿಸಲಾಗುತ್ತದೆ. ಹೀಗಾಗಿ ತಡವಾಗಿ ಶೈಕ್ಷಣಿಕ ವರ್ಷ ಆರಂಭಿಸುವಂತೆ ಪೋಷಕರು ಸರ್ಕಾರಕ್ಕೆ ಒತ್ತಾಯ ಮಾಡ್ತಿದ್ದಾರೆ. ಕೋವಿಡ್ ಸ್ಥಿತಿ - ಗತಿ ನೋಡಿಕೊಂಡು ಶಾಲಾ ಪುನಾರಂಭದ ದಿನಾಂಕ ಘೋಷಿಸುವಂತೆ ಹೇಳುತ್ತಿದ್ದಾರೆ.
ಆದರೆ, ಖಾಸಗಿ ಶಾಲೆಗಳು ಈಗ ನಿಗದಿಯಾಗಿರುವ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು. ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡುವಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. 2019-20ರಿಂದ ಪ್ರಸುತ್ತ ಸಾಲಿನ ತನಕ ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶೈಕ್ಷಣಿಕ ಚಟುವಟಿಕೆಗಳು ಅತ್ಯಂತ ಕನಿಷ್ಠ ಕಲಿಕೆ ಆಗಿವೆ. ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನ್ಯಾಯ ಎಸಗಿದಂತೆ ಆಗುತ್ತದೆ ಎಂದಿದ್ದಾರೆ.