ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ದ ಮತ್ತೊಮ್ಮೆ ಬಿಸಿಯೂಟ ಕಾರ್ಯಕರ್ತೆಯರು ಹೋರಾಟ ಮುಂದುವರೆಸಿದ್ದು, ಸ್ಥಳಕ್ಕೆ ಸಿಎಂ ಹಾಗೂ ಸಚಿವರು ಬರುವವರೆಗೂ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ಪ್ರತಿಭಟನಾಕಾರರಿಗೆ ಮುಖಂಡರ ನಿರ್ಧಾರದಿಂದ ಗೊಂದಲ ಉಂಟಾಗಿದೆ.
ಸಾವಿರಾರು ಸಂಖ್ಯೆಯಲ್ಲಿ, ಬೆಂಗಳೂರಿಗೆ ಬಂದ ಬಿಸಿಯೂಟ ತಯಾರಕರು ಎರಡು ದಿನದ ಪ್ರತಿಭಟನೆಗೆ ಸಜ್ಜಾಗಿ ಬಂದಿದ್ದರು. ಸಚಿವರು ಬಂದು ಭರವಸೆ ನೀಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ನಿಶ್ಚಯಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು.
ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಇನ್ನು ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಎರಡು ದಿನಕ್ಕೆ ನಿರ್ಧರಿಸಿದ್ದ ಪ್ರತಿಭಟನೆ ಈಗ ಮುಗಿದಿದೆ, ಊರಿಗೆ ಹೋಗುವವರು ಹೋಗಬಹುದು ಉಳಿಯುವವರು ನಾಳೆ ಹನ್ನೆರಡು ಗಂಟೆಯವರೆಗೆ ಇರಬಹುದು ಎಂದು ಮುಖಂಡರು ಘೋಷಿಸಿದರು.
ಆದರೆ, ಮುಖಂಡರ ನಿರ್ಧಾರದಿಂದ ಆಕ್ರೋಶಗೊಂಡ ಕಾರ್ಯಕರ್ತರು ನಾವು ಸಾಲ ಮಾಡಿಕೊಂಡು ಬಂದಿದ್ದೇವೆ. ಸಂಬಳ ಹೆಚ್ಚು ಮಾಡುವ ಸಂಪೂರ್ಣ ಭರವಸೆ ಸಿಗುವವರೆಗೆ ಹೋಗುವುದಿಲ್ಲ. ಕರೆದುಕೊಂಡು ಬಂದು ನಡುನೀರಲ್ಲಿ ಕೈಬಿಟ್ಟಿದ್ದೀರಿ. ನಮಗೆ ಯಾವುದೇ ಪೊಲೀಸ್ ಭದ್ರತೆ ಬೇಡ. ನಮ್ಮ ಭದ್ರತೆ ನಾವು ನೋಡಿಕೊಳ್ತವೆ. ಸಚಿವರು ಬರೋವರೆಗೂ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳು
- ಕನಿಷ್ಠ ವೇತನ ಜಾರಿಗೆ ತರಬೇಕು
- ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಮತ್ತಿತರ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈ ಬಿಡಬೇಕು
- ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಯನ್ನಾಗಿ ಪರಿವರ್ತಿಸಬೇಕು.
- ಪ್ರತಿ ತಿಂಗಳ 5 ನೇ ತಾರೀಖಿಗೆ ಸಂಬಳ ನೀಡಬೇಕು
- ಕಾರ್ಮಿಕ ಕಾಯ್ದೆಯಡಿ ಬಿಸಿಯೂಟ ತಯಾರಕರನ್ನು ತರಬೇಕು.
- ಪಿ ಎಫ್, ಇಎಸ್ ಐ ಜಾರಿಗೆ ತರಬೇಕು
- ಬಿಸಿಯೂಟ ಯೋಜನೆ ಎನ್ನುವುದನ್ನು ಕೈ ಬಿಟ್ಟು ಬಿಸಿಯೂಟ ನಿರಂತರ ಕಾರ್ಯಕ್ರಮ ಎಂದು ಬದಲಾಯಿಸಬೇಕು
- 2 ಲಕ್ಷ ರೂ. ಅಪಘಾತ ಪರಿಹಾರ ಹಾಗೂ 5 ಲಕ್ಷ ರೂ. ಮರಣ ಪರಿಹಾರ ಕೊಡಬೇಕು
- ದಸರಾ ರಜಾ ಹಾಗೂ ಬೇಸಿಗೆ ರಜೆ ಸಂಬಳ ಕೊಡಬೇಕು
- ಮಾಸಿಕ 3 ಸಾವಿರ ರೂ, ನಿವೃತ್ತಿ ಪಿಂಚಣಿ ಮತ್ತು 2 ಲಕ್ಷ ರೂ ಇಡಗಂಟು ಹಣ ನೀಡಬೇಕು
- ಕೆಲವು ಜಿಲ್ಲೆಗಳಲ್ಲಿ ಖಾಸಗಿಯವರಿಗೆ ಕೊಟ್ಟಿರುವ ಬಿಸಿಯೂಟ ಪೂರೈಕೆಯನ್ನು ತಕ್ಷಣ ಹಿಂಪಡೆಯಬೇಕು.
- ಕೆಲಸದ ಭದ್ರತೆ ಒದಗಿಸಬೇಕು.