ಬೆಂಗಳೂರು:ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ನಗರದಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿವೆ. 24 ದಿನಗಳ ಬಳಿಕ ಕೋವಿಡ್ ನಿಯಮದಂತೆ ಶಾಲೆ ಮರಳಿ ಆರಂಭವಾಗಿದ್ದು, ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಜನವರಿ 6ರಿಂದ ಕೋವಿಡ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮೀಣ ಜಿಲ್ಲಾ ಪ್ರದೇಶದ ಶಾಲೆಗಳಿಗೆ ಭೌತಿಕ ತರಗತಿಗಳನ್ನು ನಿಲ್ಲಿಸಿ, ಆನ್ಲೈನ್ ಶಿಕ್ಷಣ ನೀಡಬೇಕೆಂದು ಸರ್ಕಾರ ಆದೇಶ ನೀಡಿತ್ತು. ಇದೀಗ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇರುವುದರಿಂದ 1-9ನೇ ತರಗತಿಗಳು ಪುನಾರಂಭವಾಗಿವೆ. ಸದ್ಯ 10, 11 ಹಾಗೂ 12 ತರಗತಿಗಳು ಎಂದಿನಂತೆ ನಡೆಯುತ್ತಿದ್ದವು. ಆಯಾ ಜಿಲ್ಲಾಡಳಿತ ಹಾಗೂ ಬಿಬಿಎಂಪಿಯ ಆದೇಶದ ಪ್ರಕಾರ ಶಾಲೆ ಮತ್ತು ಕಾಲೇಜುಗಳು ಕಾರ್ಯನಿರ್ವಹಿಸಬೇಕೆಂದು ತಿಳಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶಾಲಾ ಆವರಣದಲ್ಲೇ ಮೊದಲಿಗೆ ತಾಪಮಾನ ಪರೀಕ್ಷಿಸಿ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಬಿಡಲಾಗುತ್ತಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಕ್ಕಳು ಸಾಮಾಜಿಕ ಅಂತರ ಪಾಲನೆಯೊಂದಿಗೆ ತರಗತಿಗಳಿಗೆ ಆಗಮಿಸುತ್ತಿದ್ದಾರೆ. ತರಗತಿಯಲ್ಲಿ ಒಂದು ಬೆಂಚ್ ಮೇಲೆ ಒಬ್ಬರನ್ನು ಮಾತ್ರ ಕೂರಿಸಿ ಶಿಕ್ಷಕರು ಮೊದಲು ಕೋವಿಡ್ ಕುರಿತು ತಿಳುವಳಿಕೆ ನೀಡಿದ ಬಳಿಕ ಪಾಠ, ಪ್ರವಚನ ನಡೆಸಲಾಗುತ್ತಿದೆ.
ಫೆಬ್ರವರಿ 4ರಿಂದ ವಿಶ್ವವಿದ್ಯಾನಿಲಯ ಆರಂಭ:
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಮುಖಾಮುಖಿ ತರಗತಿಗಳನ್ನು ಮರು ಆರಂಭಿಸಲು ತಯಾರಿ ನಡೆದಿದೆ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು ಫೆಬ್ರವರಿ 4ರಿಂದ ಪ್ರಾರಂಭವಾಗುತ್ತವೆ. ಹೀಗಾಗಿ, ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನೀಡಿದ ಕೊರೊನಾ ಎಸ್‌ಒಪಿಯನ್ನು ಅನುಸರಿಸಿ ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ:ಇಂದು ದೇಶದಲ್ಲಿ 2.09 ಲಕ್ಷ ಜನರಿಗೆ ಕೋವಿಡ್ ಪಾಸಿಟಿವ್.. 959 ಮಂದಿ ಸಾವು