ಬೆಂಗಳೂರು:ರಾಜ್ಯದಲ್ಲಿರುವ ಎರಡೂವರೆ ಲಕ್ಷ ಎಕರೆ ಬಂಜರು ಭೂಮಿಯನ್ನು ಪುನಶ್ಚೇತನ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದರು. ಪರಿಸರ ಉಳಿಸಲು ಸರ್ಕಾರದಿಂದ 100 ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್ ಮಂಡನೆ ಮಾಡಿದ್ದೇವೆ. ಎಲ್ಲೆಲ್ಲಿ ಅರಣ್ಯ ನಾಶ ಆಗಿದೆಯೋ, ಬಂಜರು ಭೂಮಿ ಇದೆಯೋ ಅದನ್ನ ಪುನಶ್ಚೇತನ ಮಾಡ್ತೇವೆ. ಈ ತರಹದ ಬಜೆಟ್ ದೇಶದಲ್ಲೇ ಮೊದಲಾಗಿದೆ. ರಾಜ್ಯದ ಅರಣ್ಯ ಪ್ರದೇಶ ಶೇ.24 ರಷ್ಟು ಇದ್ದು, ಅದನ್ನು ಶೇ.30ಕ್ಕೆ ಹೆಚ್ಚಿಸುತ್ತೇವೆ ಎಂದರು.
ಇಶಾ ಪ್ರತಿಷ್ಠಾನದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು. ಯಾವ ಯಾವುದೋ ಸಮಾವೇಶ ಮಾಡ್ತೇವೆ. ಆದರೆ ನಮ್ಮ ಅಸ್ತಿತ್ವ, ಭವಿಷ್ಯಕ್ಕೆ ಕಾರಣವಾಗಿರುವ ಮಣ್ಣು ಉಳಿಸಿ ಸಮಾವೇಶ ಅಗತ್ಯವಿತ್ತು. ಪಂಚಭೂತಗಳಲ್ಲಿ ಶ್ರೇಷ್ಠವಾದದ್ದು ಮಣ್ಣು. ಮಣ್ಣಿನಲ್ಲಿ ಎಲ್ಲ ಪಂಚಭೂತಗಳೂ ಅಡಕವಾಗಿವೆ.
2008 ರಲ್ಲಿ ಯಡಿಯೂರಪ್ಪ ಭೂಚೇತನ ಕಾರ್ಯಕ್ರಮ ತಂದ್ರು. ಭೂಚೇತನ ಮಣ್ಣಿನಲ್ಲಿರುವ ಸತ್ವ, ಸಾರ ಉಳಿಸುವ ಯೋಜನೆಯಾಗಿದೆ. ಮಣ್ಣಿನಲ್ಲಿ ನೈಸರ್ಗಿಕ ಸತ್ವ, ಸಾರ ಕಮ್ಮಿ ಇದ್ದರೆ ಅದನ್ನು ಸರಿದೂಗಿಸುವ ಕಾರ್ಯಕ್ರಮ ಇದು. ಮಣ್ಣು ಉಳಿಸಿ ಪರಿಕಲ್ಪನೆಯನ್ನು ದೂರದೃಷ್ಟಿಯಿಂದ ಅಂದೇ ಯಡಿಯೂರಪ್ಪ ಪರಿಚಯಿಸಿದರು. ಮಣ್ಣು ಉಳಿಸಿ ಅಭಿಯಾನ ಐತಿಹಾಸಿಕ ಮಹತ್ವದ್ದು. ಜಗತ್ತಿನ ಇತಿಹಾಸದ ಪುಟಗಳಲ್ಲಿ ಈ ಅಭಿಯಾನ ದಾಖಲೆ ಆಗಲಿದೆ ಎಂದು ತಿಳಿಸಿದರು.
ಈ ಅಭಿಯಾನ ಯಶಸ್ವಿ ಆಗಿದೆ, ಮುಂದೆಯೂ ಯಶಸ್ವಿಯಾಗಲಿದೆ. ಹುಟ್ಟುವ ಮಗುವಿಗೂ ಈ ಅಭಿಯಾನ ಅವಶ್ಯಕತೆ ಇದೆ. ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರದ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.