ಬೆಂಗಳೂರು :ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಟಿಕೆಟ್ ನೀಡಿಕೆ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಬಹಳಷ್ಟು ಹೆಸರು ಚರ್ಚೆಯಾಗಿವೆ. ಇನ್ನೊಂದು ಸುತ್ತಿನ ಸಭೆ ನಡೆಯಲಿದೆ. ಅಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಮುಂದಿನ ಸಭೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದರು.
ರಾಜ್ಯ ರಾಜಕಾರಣದ ಮೇಲಿನ ಒಲವು ವಿಚಾರವಾಗಿ ಮಾತನಾಡಿದ ಅವರು, ನಾವು ನಮ್ಮ ಅಭಿಪ್ರಾಯವನ್ನ ಹೇಳಿದ್ದೇವೆ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಯಾವ ನಿರ್ಧಾರ ಮಾಡುತ್ತೆ, ಅದಕ್ಕೆ ನಾವು ಬದ್ಧ. ಸಾಕಷ್ಟು ಹೆಸರುಗಳು ಚರ್ಚೆಯಲ್ಲಿವೆ. ನನ್ನ ಹೆಸರು ಅಂತಿಮವಾಗಿಲ್ಲ ಎಂದು ನುಡಿದರು.
ಬಿಜೆಪಿ ನೆಲದಲ್ಲಿ ಕಾಂಗ್ರೆಸ್ ಹರಕೆ ಕುರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮದೆಯಾದ ಮತಗಳು ಅಲ್ಲಿವೆ. ಹಿಂದೆಯೂ ನಾಲ್ಕು ಲಕ್ಷ ಮತಗಳನ್ನ ಪಡೆದಿದ್ದೆವು. ಯಾರೂ ಹರಕೆಯ ಕುರಿಯಾಗ್ತಾರೆ ಅನ್ನೋ ಪ್ರಶ್ನೆಯಲ್ಲ. ಕಾರ್ಯಕರ್ತರು ನಮ್ಮ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚನ್ನರಾಜ್, ಪ್ರಕಾಶ್ ಹುಕ್ಕೇರಿ, ಅನಿಲ್ ಲಾಡ್ ಸೇರಿ ಹಲವರ ಹೆಸರು ಪ್ರಸ್ತಾಪವಾಗಿವೆ. ಹುಬ್ಬಳ್ಳಿಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲಾ ಫೈನಲ್ ಆಗುತ್ತೆ ಎಂದರು.
ಬೆಳಗಾವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ : ಸತೀಶ್ ಜಾರಕಿಹೊಳಿ ಮೂರ್ನಾಲ್ಕು ಹೆಸರು ಪ್ರಸ್ತಾಪ :ಇಂದು ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮೂರು ಹೆಸರು ಅಂತಿಮ ಮಾಡಿ ಹೈಕಮಾಂಡ್ಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ.
ಸತೀಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ ಹಾಗೂ ಚನ್ನರಾಜು ಹೆಸರು ಹೈಕಮಾಂಡ್ಗೆ ಕಳುಹಿಸಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಇದರಲ್ಲಿ ಮೊದಲ ಹೆಸರು ಸತೀಶ್ ಜಾರಕಿಹೊಳಿ ಎಂದು ಹೇಳಲಾಗುತ್ತಿದೆ.
ಬಹುತೇಕ ಸತೀಶ್ ಜಾರಕಿಹೊಳಿ ಅಭ್ಯರ್ಥಿ ಮಾಡಲು ರಾಜ್ಯದ ಹೆಚ್ಚಿನ ನಾಯಕರಿಂದ ಒಲವು ವ್ಯಕ್ತವಾಗಿದೆ. ಆದರೆ, ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರು, ಅನಿಲ್ ಲಾಡ್ ಹೆಸರೂ ಕೂಡ ಪ್ರಸ್ತಾಪಿಸಿ ಕುತೂಹಲ ಹೆಚ್ಚಿಸಿದ್ದಾರೆ.