ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಸರ್ಕಾರಿ ಶಾಲಾ ಮಕ್ಕಳಿಂದ ಉಪಗ್ರಹ ತಯಾರಿ ಕೆಲಸ ನಡೆಯಲಿದ್ದು, ಈ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ ಎಂದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣ ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಉಪಗ್ರಹ ತಯಾರಿ ಮಾಡಲು ನಿಶ್ಚಯವಾಗಿದ್ದು, ಇದನ್ನು ಸೆಪ್ಟೆಂಬರ್ - ಅಕ್ಟೋಬರ್ ಒಳಗೆ ಲಾಂಚ್ ಮಾಡಲು ಎಲ್ಲ ತಯಾರಿ ನಡೆದಿದೆ. ಇದಕ್ಕಾಗಿ 1 ಕೋಟಿ 90 ಲಕ್ಷ ರೂ. ವೆಚ್ಚ ತಗುಲಿದೆ. ಸಾಮಾನ್ಯವಾಗಿ ಸ್ಯಾಟಲೈಟ್ ಮುಂಚೆ ಮಾಡಲು 50-60 ಕೋಟಿ ಆಗ್ತಿತ್ತು. ಹಾಗೇ 60 ಕೆಜಿ ತೂಕ ಇರ್ತಿತ್ತು. ಆದರೆ ಈಗ ಸರಳಗೊಳಿಸಿ ಒಂದೂವರೆ ಕೆಜಿ ತೂಕದಲ್ಲಿ ನಿರ್ಮಾಣ ಮಾಡಲಾಗ್ತಿದೆ ಎಂದು ಸಚಿವರು ವಿವರಿಸಿದರು.
ವಿಜ್ಞಾನ-ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಈ ಯೋಜನೆಗೆ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿ ಸರ್ಕಾರಿ ಶಾಲಾ ಮಕ್ಕಳಿಂದ ಉಪಗ್ರಹ ತಯಾರಿ ಕೆಲಸ ನಡೆಯಲಿದೆ. ಮಕ್ಕಳಿಗೆ ಪುನೀತ್ ಅಂದರೆ ಇಷ್ಟ ಹೀಗಾಗಿ ಪುನೀತ್ ಹೆಸರು ಇಡಲಾಗಿದೆ ಎಂದು ಹೇಳಿದರು.