ಬೆಂಗಳೂರು:ಸ್ಯಾಂಡಲ್ವುಡ್ನ ಬಹುಬೇಡಿಕೆಯ ಸಂಭಾಷಣೆಕಾರ (ಡೈಲಾಗ್ ರೈಟರ್)ರಾಗಿ ಗುರುತಿಸಿಕೊಂಡಿದ್ದ ಗುರು ಕಶ್ಯಪ್ (45) ಅವರು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ಕನ್ನಡದ ಹಲವಾರು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್ ಅವರಿಗೆ ಕಳೆದ ರಾತ್ರಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ', ಗಣೇಶ್ ಅಭಿನಯದ 'ಸುಂದರಾಂಗ ಜಾಣ', ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ', ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಸೇರಿದಂತೆ ಅನೇಕ ಸಿನಿಮಾಗಳಿಗೆ ಗುರು ಕಶ್ಯಪ್ ಡೈಲಾಗ್ ರೈಟರ್ ಆಗಿ ಕೆಲಸ ಮಾಡಿದ್ದಾರೆ.
ನಿಧನಕ್ಕೂ ಮುನ್ನ ಅನೇಕ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದ ಅವರು ಧನಂಜಯ ನಟನೆಯ 'ಮಾನ್ಸೂನ್ ರಾಗ', ಶಿವರಾಜ್ಕುಮಾರ್ ಅಭಿನಯದ 'ಬೈರಾಗಿ', 'ವ್ಹೀಲ್ ಚೇರ್ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಡೈಲಾಗ್ ಬರೆಯುತ್ತಿದ್ದರು. ಆ ಸಿನಿಮಾಗಳು ತೆರೆಕಾಣುವುದಕ್ಕೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.
ಗುರು ಕಶ್ಯಪ್ ತಮ್ಮ ಪತ್ನಿ ಮತ್ತು ಮಗಳನ್ನು ಅಗಲಿದ್ದು, ಇವರ ಸಾವಿಗೆ ನಟ, ನಿರ್ದೇಶಕ ರಮೇಶ್ ಅರವಿಂದ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. "ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಪುಷ್ಪಕ ವಿಮಾನ, ಸುಂದರಾಂಗಜಾಣ,100 ಚಿತ್ರಗಳ ಡೈಲಾಗ್ ರೈಟರ್.. ಸಂಜೆ ನಗುತ್ತಾ ನಾರ್ಮಲ್ ಆಗಿ ಇದ್ದವರು ರಾತ್ರಿ ಜೀವ ತೊರದಿದ್ದಾರೆ! ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಠ ಬರಹಗಾರರನ್ನು ಕಳೆದು ಕೊಂಡಿದ್ದೇವೆ. ಓಂ ಶಾಂತಿ" ಎಂದು ರಮೇಶ್ ಅರವಿಂದ್ ಟ್ವೀಟ್ ಮಾಡಿ, ಅವರೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.