ಬೆಂಗಳೂರು: ಅಜಯ್ ರಾವ್ ನಾಯಕರಾಗಿ ನಟಿಸಿರುವ ಶೋಕಿವಾಲ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ನಾಯಕ ಅಜಯ್ ರಾವ್ ಅವರೊಂದಿಗೆ ಸ್ಯಾಂಡಲ್ವುಡ್ನ ನಿರ್ದೇಶಕರಾದ ರವಿ ಬಸ್ರೂರ್, ನಂದಕಿಶೋರ್, ಹರಿ ಸಂತೋಷ್, ಶಶಾಂಕ್, ವಿ.ನಾಗೇಂದ್ರ ಪ್ರಸಾದ್ ಹೆಜ್ಜೆ ಹಾಕಿದ್ದಾರೆ.
ಎಲ್ಲಾ ದಿಗ್ಗಜರ ಸಮಾಗಮದಲ್ಲಿ ಮೂಡಿ ಬಂದಿರುವ ವಿಶೇಷ ಹಾಡು ಇದು. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಹಾಡಿನಲ್ಲಿ ನಟಿಸಿರುವ ನಿರ್ದೇಶಕರುಗಳೇ ಈ ಹಾಡನ್ನು ರೀಲಿಸ್ ಮಾಡಿದ್ದು ವಿಶೇಷ.
ವಿ.ನಾಗೇಂದ್ರಪ್ರಸಾದ್, ನಂದಕಿಶೋರ್, ಹರಿ ಸಂತೋಷ್, ಚೇತನ್ ಕುಮಾರ್, ಮಹೇಶ್ ಕುಮಾರ್ ರವರು ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. 5 ಜನ ನಿರ್ದೇಶಕರನ್ನು ಚಿತ್ರ ತಂಡದಿಂದ ಸನ್ಮಾನಿಸಲಾಯಿತು.