ಕರ್ನಾಟಕ

karnataka

ETV Bharat / city

ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ: ಸಿಎಂಗೆ ಸಲೀಂ ಅಹ್ಮದ್ ಒತ್ತಾಯ - ಬೆಡ್​ ಬ್ಲಾಕಿಂಗ್ ದಂಧೆ

ಕೋವಿಡ್ ವಾರ್ ರೂಂ ಮುಖ್ಯಸ್ಥರು ಹಾಗೂ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಎಂಗೆ ಸಲೀಂ ಅಹ್ಮದ್ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ಅಧಿಕಾರಿಗಳನ್ನು ಅಮನತು ಮಾಡುವಂತೆ ಸಿಎಂಗೆ ಸಲೀಂ ಅಹ್ಮದ್ ಒತ್ತಾಯ
ಅಧಿಕಾರಿಗಳನ್ನು ಅಮನತು ಮಾಡುವಂತೆ ಸಿಎಂಗೆ ಸಲೀಂ ಅಹ್ಮದ್ ಒತ್ತಾಯ

By

Published : May 5, 2021, 6:42 PM IST

Updated : May 5, 2021, 6:49 PM IST

ಬೆಂಗಳೂರು:ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಮಾಡಿರುವ ಆಪಾದನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು, ಕೋವಿಡ್ ವಾರ್ ರೂಂ ಮುಖ್ಯಸ್ಥರನ್ನು ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಮೇ 4 ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರು ಹಾಗೂ ಶಾಸಕರು ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ್ದರು. ಈ ಆರೋಪ ಮಾಡಿರುವವರು ತಮ್ಮದೇ ಸರ್ಕಾರದ ಸಚಿವರ ವೈಫಲ್ಯವನ್ನು ಪ್ರಶ್ನಿಸಲಾಗದೇ ಬೇರೆಯವರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನರು ಜೀವದೊಂದಿಗೆ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಪ್ರಚಾರ ಪಡೆಯಲು ಕ್ಷುಲ್ಲಕ ಕೋಮು ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ಕೋಮಿನ ಮೇಲೆ ಆರೋಪ ಸರಿಯಲ್ಲ:

ಬೆಡ್ ಬ್ಲಾಕಿಂಗ್‌ಗೆ ಸಂಬಂಧಪಟ್ಟಂತೆ ಸೂಪರ್ ಅಡ್ಮಿನ್ ಯಾರಿರುತ್ತಾರೋ ಅವರು ಅದಕ್ಕೆ ನೇರ ಹೊಣೆಯಾಗುತ್ತಾರೆ. ಈ ಸೂಪರ್ ಅಡ್ಮಿನ್ ಕೋವಿಡ್ ಟಾಸ್ಕ್‌ಫೋರ್ಸ್​ ಮುಖ್ಯಸ್ಥರು, ಬಿಬಿಎಂಪಿ ಆಡಳಿತಾಧಿಕಾರಿಗಳು ಹಾಗೂ ಆರೋಗ್ಯ ಸಚಿವರಾಗಿರುತ್ತಾರೆ. ಈ ವಿಚಾರ ಸದರಿ ಸಂಸದರು, ಶಾಸಕರಿಗೂ ತಿಳಿದಿರುವಂತದ್ದೇ ಆಗಿದೆ. ಆದಾಗ್ಯೂ ಸದರಿ ಬೆಡ್ ಬ್ಲಾಕಿಂಗ್ ಹಗರಣ ಗಂಭೀರ ಸ್ವರೂಪದ್ದಾಗಿದ್ದು, ಬಿಬಿಎಂಪಿ ಕೋವಿಡ್ ವಾರ್ ರೂಂ ನಲ್ಲಿ 205 ಜನ ಕೆಲಸ ಮಾಡುತ್ತಿದ್ದು, ಅವರಲ್ಲಿ 17 ಜನ ಒಂದೇ ಕೋಮಿಗೆ ಸೇರಿದವರ ಮೇಲೆ ಆಪಾದನೆ ಹೊರಿಸಿ ಕೊರೊನಾ ಸಂದರ್ಭದಲ್ಲಿಯೂ ಧರ್ಮವನ್ನು ತರುವಂತಹ ಕೆಟ್ಟ ಚಾಳಿಯ ಬಾಲಿಶ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ
ಮುಖ್ಯಮಂತ್ರಿಗಳು ತಮ್ಮ ಅಧಿಕಾರ ಬಳಸಿ ಈ ದಂಧೆಗೆ ಕಾರಣರಾಗಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಪ್ಪಿತಸ್ಥರನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇನೆ. ಕೊರೊನಾ ಧರ್ಮ, ದೇಶಗಳನ್ನು ಮೀರಿದ ಮಹಾಮಾರಿಯಾಗಿದೆ. ಎಲ್ಲ ಧರ್ಮ ಜಾತಿಗಳ ಜನರು ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೇ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ನಿಮ್ಮ ಪಕ್ಷದ ಸಂಸದರು, ಶಾಸಕರು ವಿಷಕಾರಿ ಕೋಮು ರಾಜಕಾರಣಕ್ಕೆ ಮುಂದಾಗಿರುವುದು ವಿಷಾದನೀಯ. ತಾವುಗಳು ಪಕ್ಷ ಹಾಗೂ ಸರ್ಕಾರದ ಹಿರಿಯರಾಗಿ ಇಂತಹ ದುರಂತಮಯ ಸಂದರ್ಭದಲ್ಲಿಯೂ ಕೋಮು ರಾಜಕಾರಣ ಮಾಡುತ್ತಿರುವ ಸಂಸದರು, ಶಾಸಕರಿಗೆ ಛೀಮಾರಿ ಹಾಕಿ ತಿಳಿವಳಿಕೆ ಹೇಳಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ವಿನಂತಿ ಪೂರ್ವಕ ಆಗ್ರಹ ಮಾಡಿದ್ದಾರೆ.

Last Updated : May 5, 2021, 6:49 PM IST

ABOUT THE AUTHOR

...view details