ಬೆಂಗಳೂರು :ಮುಖ್ಯಮಂತ್ರಿಯಾಗಿದ್ದ ವೇಳೆ ಡಿ ವಿ ಸದಾನಂದಗೌಡ ಆರಂಭಿಸಿದ್ದ ಸಕಾಲ ಸೇವೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಹಾಗೂ ವಿಸ್ತಾರ ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಸೇವೆಯಲ್ಲಿಯೂ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಯಡಿಯೂರಪ್ಪ ಸರ್ಕಾರ ಉತ್ತೇಜನ ನೀಡಿ ಕೈಗೊಂಡ ಕಾಮಗಾರಿಗಳು ಸಾಕಷ್ಟಿವೆ.
2012ರಲ್ಲಿ ಸಿಎಂ ಆಗಿದ್ದ ಸಂದರ್ಭ ಸದಾನಂದಗೌಡ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದರು. ಹಂತ ಹಂತವಾಗಿ ಇದು ಎಲ್ಲಾ ಸೇವೆಗಳನ್ನೂ ತನ್ನ ವ್ಯಾಪ್ತಿಗೆ ಒಳಪಡಿಸಿಕೊಳ್ಳುತ್ತಾ ಬಂದಿದೆ. 2012ರ ಮಾರ್ಚ್ 1ರಿಂದ ಸಕಾಲ ಸೇವೆ ರಾಜ್ಯದ ನಾಲ್ಕು ತಾಲೂಕು ಹಾಗೂ ಬೆಂಗಳೂರಿನ ಜಯನಗರ ಕಂದಾಯ ವಿಭಾಗದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿತ್ತು. ಮುಂದಿನ ದಿನಗಳಲ್ಲಿ ಇದು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಸದ್ಯ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಒಟ್ಟು 95 ವಿಭಾಗಗಳ 1,019 ಸೇವೆಗಳು ಇದರ ವ್ಯಾಪ್ತಿಯಡಿ ಬರುತ್ತವೆ. ಈವರೆಗೆ 21,53,46,382 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 21,49,29,359 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2012ರಲ್ಲಿ ಸೇವೆ ಆರಂಭವಾದಾಗ 151 ಸೇವೆ ವ್ಯಾಪ್ತಿ ಒಳಗೊಂಡಿದ್ದ ಸಕಾಲ, ಇಂದು ಈ ಹಂತ ತಲುಪಿದೆ.
ಒಂದು ವರ್ಷದ ಬಿಜೆಪಿ ಸರ್ಕಾರದ ಪ್ರಗತಿಯ ವಿವರ :ಸಕಾಲ ಯೋಜನೆ ಅಡಿ ಅಬಕಾರಿ ಇಲಾಖೆಯ 39 ಸೇವೆಗಳನ್ನು ತರಲಾಗಿದೆ ಮತ್ತು ಭ್ರಷ್ಟಾಚಾರ ಹತ್ತಿಕ್ಕಲು ಆನ್ಲೈನ್ನಲ್ಲಿ 25 ಸೇವೆಗಳನ್ನು ಒದಗಿಸಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಸಮಾಜ ಕಲ್ಯಾಣ ಇಲಾಖೆಯ ಪ್ರಮುಖ 9 ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸಕಾಲ ಯೋಜನೆಯ ವ್ಯಾಪ್ತಿಗೆ ಒಳಪಡಿಸಿದ್ದರು. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಜ್ಯದ ಪ್ರಮುಖ ಜಿಲ್ಲಾ ರಸ್ತೆ ಜಾಲದ 76,257 ಕಿ.ಮೀ.ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗಿದ್ದು, 2019-20ರಲ್ಲಿ ರೂ. 9033 ಕೋಟಿಗಳಲ್ಲಿ, ರೂ. 8,788 ಕೋಟಿ ಸಾಧಿಸಲಾಗಿದೆ (ಶೇ.97).