ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ ಸಂಬಂಧ ನಾಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಶಾಲೆಗಳ ಭೌತಿಕ ತರಗತಿಗೆ ಅನುಮತಿ ನೀಡುವಂತೆ ರುಪ್ಸಾ ಸಂಘಟನೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದೆ.
ರಾಜ್ಯ ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ, ಸಾವಿನ ಪ್ರಮಾಣ ಶೇ.0.03 ರಷ್ಟಿದೆ. ಅಂತಿಮ ಪರೀಕ್ಷೆಗಳಿಗೆ ಕೇವಲ 2 ತಿಂಗಳು ಬಾಕಿ ಇದೆ. ಮಕ್ಕಳಿಗೆ ಈವರೆಗೆ ಕೇವಲ 4 ತಿಂಗಳಷ್ಟೇ ಪಾಠ ನಡೆದಿದೆ. ಹೀಗಾಗಿ, ಪರೀಕ್ಷೆಗೆ ಸೂಕ್ತ ತಯಾರಿ ನಡೆಸಲು ಭೌತಿಕ ತರಗತಿಗಳಿಗೆ ಅನುಮತಿ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಬಡ, ಕೂಲಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡುವುದು ಕಷ್ಟಸಾಧ್ಯ. ಈ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಇದು ಮುಂದಿನ ಶೈಕ್ಷಣಿಕ ವರ್ಷಕ್ಕೂ ಸಮಸ್ಯೆಯಾಗುತ್ತದೆ. ಜಗತ್ತಿನ ಯಾವುದೇ ದೇಶದಲ್ಲಿ ಭೌತಿಕ ತರಗತಿಗಳನ್ನು ನಿಲ್ಲಿಸಿಲ್ಲ. ಹೀಗಾಗಿ ವಾರಾಂತ್ಯ ಕರ್ಫ್ಯೂ ಸಡಿಲಿಸಿ, ಭೌತಿಕ ತರಗತಿಗೆ ಅನುಮತಿ ನೀಡುವಂತೆ ಕೋರಿ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ಹೆಚ್ಚಳ; ಕೇಂದ್ರ ಆರೋಗ್ಯ ಇಲಾಖೆ ಕಳವಳ