ಬೆಂಗಳೂರು:ಒಮಿಕ್ರಾನ್ ಕಾರಣದಿಂದ 2021-22ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷೆ ಮತ್ತಷ್ಟು ವಿಳಂಬವಾಗುತ್ತಾ ಎಂಬ ಅನುಮಾನ ಮೂಡಿದೆ. ಈಗಾಗಲೇ ಪರೀಕ್ಷಾ ಮಂಡಳಿ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಮಾರ್ಚ್ ಬದಲು ಏಪ್ರಿಲ್ ಅಂತ್ಯದಲ್ಲಿ ದಿನಾಂಕ ಪ್ರಕಟಿಸುವ ಆಲೋಚನೆ ಇದೆ ಎಂದು ಹೇಳಲಾಗ್ತಿದೆ.
ಕೋವಿಡ್ 2ನೇ ಅಲೆಯ ಸಂರ್ದಭದಲ್ಲಿ ಶಾಲೆಗಳು ತಡವಾಗಿ ಆರಂಭಗೊಂಡಿದ್ದವು. ಇತ್ತ ಪಠ್ಯಕ್ರಮ ಬೋಧನೆಯು ಪೂರ್ಣವಾಗಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯೂ ಶೇ. 20ರಷ್ಟು ಪಠ್ಯ ಕಡಿತ ಮಾಡಲಾಗಿದ್ದರೂ ಶೇ.80 ರಷ್ಟು ಪಠ್ಯ ಪೂರ್ಣಗೊಳಿಸಲು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದ ಕಾಲಾವಧಿ ಬೇಕಾಗುತ್ತದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಹೀಗಾಗಿ, 2021-22ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಇನ್ನೂ ನಿರ್ಧರಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಶಾಲೆಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ಸಹ ನಡೆಸಿ ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಒಳಪಡಿಸಿಲ್ಲ. ಆದರೆ ಅದೇ 10ನೇ ತರಗತಿಯ ಸಿಬಿಎಸ್ಸಿ ಹಾಗೂ ಐಸಿಎಸ್ಈ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಸಲಾಗಿದೆ. ಇದು ಒಂದೇ ರಾಜ್ಯದಲ್ಲಿ ಎರಡು ನೀತಿ ಮತ್ತು ವಿದ್ಯಾರ್ಥಿಗಳ ಫಲಿತಾಂಶ ನಿರ್ಧರಿಸುವಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ಒಂದು ವೇಳೆ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಹರಡಿ, ಶಾಲೆಗಳು ಭೌತಿಕ ತರಗತಿಯನ್ನು ನಿಲ್ಲಿಸಿದರೆ, ಈ ಹಿಂದಿನ ವರ್ಷದಂತೆ ಅವೈಜ್ಞಾನಿಕವಾಗಿ ಫಲಿತಾಂಶ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.