ಕರ್ನಾಟಕ

karnataka

ETV Bharat / city

ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ: ಆರೋಪ-ಪ್ರತ್ಯಾರೋಪ! - ವಿಧಾನಸಭೆಯಲ್ಲಿ ಬಜೆಟ್​ ಚರ್ಚೆ

ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಯ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಸರ್ವನಾಶ್' ಎಂಬ ಪದ ಬಳಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕಾರಣಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದ, ಆರೋಪ-ಪ್ರತ್ಯಾರೋಪಕ್ಕೆ ಇಂದು ವಿಧಾನಸಭೆ ಸಾಕ್ಷಿಯಾಯಿತು.

Conversation between ruling Party and Opposite Party
ವಿಧಾನಸಭೆಯಲ್ಲಿ ಬಜೆಟ್​ ಚರ್ಚೆ ವೇಳೆ ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

By

Published : Mar 8, 2022, 5:44 PM IST

ಬೆಂಗಳೂರು:ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್, ಸಬ್ ಕಾ ಸರ್ವನಾಶ್' ಎಂಬ ಪದ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕಾರಣಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದ, ಆರೋಪ-ಪ್ರತ್ಯಾರೋಪಕ್ಕೆ ಇಂದು ವಿಧಾನಸಭೆ ಸಾಕ್ಷಿಯಾಯಿತು.

ವಿಧಾನಸಭೆಯಲ್ಲಿ ಇಂದೂ ಸಹ ಬಜೆಟ್ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಭಾಷಣ ಮುಂದುವರಿಸಿದ್ದು, ಸಬ್ ಕಾ ಸಾಥ್, ಸಬ್ವಕಾ ವಿಕಾಸ್ ಎಂದು ಹೇಳಿದ್ದೀರಿ. ಈಗ ಸರ್ವ ವಿನಾಶ್ ಆಗಿದೆ ಎಂದು ಸಿದ್ದರಾಮಯ್ಯ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 1972 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗರೀಭಿ ಹಠಾವೋ ಯೋಜನೆಯನ್ನು ಘೋಷಣೆ ಮಾಡಿದ್ದರು. ಕಳೆದ 10 ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷ. ಹಾಗಿದ್ದರೆ ದೇಶದಲ್ಲಿ ಬಡತನ ನಿರ್ಮೂಲನೆಯಾಗಿದೆಯೇ? ಎಂದು ತಿರುಗೇಟು ನೀಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ರಾಜ್ಯ ಸರ್ಕಾರ ಇಂದು ಹೆಚ್ಚಿನ ಸಾಲ ಮಾಡಿದೆ. ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎರಡೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೇನಾ ನಿಮ್ಮ ಸಾಧನೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯದಿಂದ 25 ಲೋಕಸಭಾ ಸದಸ್ಯರು ಇದ್ದರೂ ಕೇಂದ್ರ ಸರ್ಕಾರದ ಮೇಲೆ ಎಂದಾದರೂ ಒತ್ತಡ ಹಾಕಿ ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪರಿಹಾರ ತಂದಿದ್ದೀರಾ? ಕೇಂದ್ರದಿಂದ ಎಷ್ಟು ಅನ್ಯಾಯವಾಗುತ್ತಿದೆ. ಏನು ಪ್ರಯೋಜನವಾಗಿದೆ ಎಂದು ಕೇಳಿದರು.

ನಾನು ಹಣಕಾಸು ಸಚಿವನಾಗಿದ್ದಾಗ ವಿತ್ತೀಯ ಕೊರತೆ ನಿರ್ವಹಣೆ ಮಿತಿಯನ್ನು ಅನುಸರಿಸಿದ್ದೆ. ನೀವು ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಶಿಸ್ತು ಮಾಯವಾಗಿ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ನೆರವಿಗೆ ಬರುತ್ತಿಲ್ಲ. ಅದನ್ನು ಕೇಳುತ್ತಲೂ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಂತದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಧ್ಯ ಪ್ರವೇಶಿಸಿ ಯಾವ ಸರ್ಕಾರದ ಅವಧಿಯಲ್ಲಿ ಸಾಲ ಮಾಡಿಲ್ಲ ಹೇಳಿ, ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದರೆ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಇದುವರೆಗೂ ಆಡಳಿತ ನಡೆಸಿದವರು ಸಾಲವನ್ನೇ ಮಾಡದ ಆಡಳಿತ ನಡೆಸಿದ್ದೇವೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಾಲ ಮಾಡದೆ ಆಡಳಿತ ನಡೆಸಲು ಯಾವುದೇ ಸರ್ಕಾರಗಳಿಂದಲೂ ಸಾಧ್ಯವಿಲ್ಲ. ಅದು ನನಗೂ ಗೊತ್ತು. ಸಾಲ ಮಾಡುವುದು ಎಲ್ಲ ಸರ್ಕಾರಗಳಿಗೂ ಅನಿವಾರ್ಯ. ಆದರೆ ನಮ್ಮ ಆರ್ಥಿಕ ಶಿಸ್ತನ್ನು ಮೀರಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ವೇಳೆ ಮತ್ತೆ ಆಡಳಿತ -ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕೇಂದ್ರ ಸರ್ಕಾರ ಇಂದು ಎಲ್ಲವನ್ನು ಖಾಸಗೀಕರಣ ಮಾಡುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ನೀವು ವಿಫಲರಾಗಿದ್ದೀರಿ, ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಸ್ತಿನ ಜೊತೆಗೆ ಎಲ್ಲ ಕ್ಷೇತ್ರಗಳನ್ನು ಸುಧಾರಣೆ ಮಾಡಿತ್ತು. ಎನ್‌ಡಿಎ ಸರ್ಕಾರ ಬಂದ ಮೇಲೆ ಎಲ್ಲವನ್ನೂ ಹಾಳು ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಇದಕ್ಕೆ ಬಿಜೆಪಿ ಸದಸ್ಯರು ತಿರುಗೇಟು ನೀಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಡೀ ದೇಶವೇ ಹೆಮ್ಮೆ ಪಡುವ ರಸ್ತೆಗಳನ್ನು ನಿರ್ಮಾಣ ಮಾಡಿದರು. ಆ ರಸ್ತೆಗಳಲ್ಲಿ ನೀವು ಓಡಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬರುತ್ತಿದ್ದಂತೆ ಹೆದ್ದಾರಿಗಳಲ್ಲಿ ಹಾಕಿದ್ದ ಪ್ಲೆಕ್ಸ್‌ಬೋರ್ಡ್‌ಗಳನ್ನು ತೆಗೆದು ಹಾಕಲು ಅನುದಾನ ಮೀಸಲಿಟ್ಟಿದ್ದೀರಿ. ನಿಮಗೆ ಬೇರೊಂದು ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವರು ಸೇರಿದಂತೆ ಬಿಜೆಪಿ ಸದಸ್ಯರು ಮುಗಿಬಿದ್ದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ದೇಶದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದು ಕಾಂಗ್ರೆಸ್, ಕೈಗಾರಿಕೆಯನ್ನು ಸ್ಥಾಪನೆ ಮಾಡಿದರು. ಕೇಂದ್ರದಲ್ಲಿ ಕಳೆದ 7 ವರ್ಷದಿಂದ ಅಧಿಕಾರದಲ್ಲಿರುವ ನಿಮ್ಮ ಸರ್ಕಾರ ಏನು ಮಾಡುತ್ತಿದೆ? ಇಂದು ಪ್ರತಿಯೊಂದನ್ನು ಮುಚ್ಚುವ ಹಂತಕ್ಕೆ ತಲುಪಿಸಿದ್ದೀರಿ, ಖಾಸಗೀಕರಣ ಮಾಡುವುದೇ ನಿಮ್ಮ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಸಚಿವ ಗೋವಿಂದ ಕಾರಜೋಳ ಎದ್ದು ನಿಂತು, ನೀರಾವರಿ ಯೋಜನೆಯಲ್ಲಿ ದೇಶಕ್ಕೆ ಅನ್ಯಾಯವಾಗಿದ್ದರೆ ಅದು ಕಾಂಗ್ರೆಸ್‌ನಿಂದ ಎಂದು ತಿರುಗೇಟು ನೀಡಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ನಾಲ್ಕೂವರೆ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರೆ, ಡಬ್ಲ್ಯೂಯುಟಿಒ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾರು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ನವರತ್ನಗಳನ್ನು ಮಾರಾಟ ಮಾಡಿದ್ದು ನಿಮ್ಮ ಕಾಲದಲ್ಲಿ ಎಂದರು. ಬಳಿಕ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಸದನವನ್ನು ವಿರಾಮಕ್ಕೆ ಮುಂದೂಡಿದರು.

ABOUT THE AUTHOR

...view details