ಬೆಂಗಳೂರು:ಕೊರೊನಾ ವೈರಸ್ ಜನರನ್ನ ಬಿಟ್ಟು ಬಿಡದೇ ಕಾಡ್ತಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಂತ ಹಂತವಾಗಿ ಹಲವು ಕ್ರಮಗಳನ್ನ ಕೈಗೊಳ್ತಾ ಬರ್ತಿದೆ. ಕಳೆದ ಎರಡು ವಾರದಿಂದ ಇಳಿಕೆ ಕಂಡಿದ್ದ ಸೋಂಕಿತರ ಸಂಖ್ಯೆಯು ನಿನ್ನೆ ದಿಢೀರ್ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಮೂರನೇ ಅಲೆ ಎಂಟ್ರಿ ಕೊಟ್ಟು ಬಿಡ್ತಾ ಅನ್ನೋ ಆತಂಕ ಶುರುವಾಗಿದೆ.
ಹೌದು, ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬೀಳುವ ಭಯ ಶುರುವಾಗಿದೆ. ಈಗಷ್ಟೇ ಚೇತರಿಕೆಯತ್ತ ಹೆಜ್ಜೆ ಇಡ್ತಿರುವ ಜನರ ಚಟುವಟಿಕೆಗಳಿಗೆ ಎಲ್ಲಿ ಲಾಕ್ಡೌನ್ ಹೇರಲಾಗುತ್ತೋ ಅನ್ನೋ ಭೀತಿ ಶುರುವಾಗಿದೆ.
ಇತ್ತ ಕೋವಿಡ್ ಮೂರನೇ ಅಲೆ ಕಾರಣಕ್ಕೆ ಆರೋಗ್ಯ ಇಲಾಖೆ ಹಲವು ಟಫ್ ರೂಲ್ಸ್ ಜಾರಿ ಮಾಡಲು ಪ್ಲಾನ್ ಮಾಡಿದ್ದು, ಕೆಲ ನಿರ್ಬಂಧಕ್ಕೆ ಕೊಟ್ಟಿದ್ದ ವಿನಾಯಿತಿಯನ್ನೂ ಹಿಂಪಡೆದಿದೆ. ಅದರಲ್ಲಿ ಮುಖ್ಯವಾಗಿ, ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರಿಗೆ RTPCR ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ.
ಈ ಹಿಂದೆ ಮೊದಲ ಕೋವಿಡ್ ಡೋಸ್ ಪಡೆದವರಿಗೆ ನೆಗೆಟಿವ್ ರಿಪೋರ್ಟ್ ತರುವುದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ, ಇದೀಗ ಲಸಿಕೆ ಪಡೆದಿದ್ದರೂ ರಾಜ್ಯಕ್ಕೆ ಬರಬೇಕು ಅಂದರೆ 72 ಗಂಟೆಗಳ ಕಡ್ಡಾಯ ರಿಪೋರ್ಟ್ ತರಲೇಬೇಕು. ಈ ವಿನಾಯಿಯಿ ವಾಪಸ್ ಪಡೆದಿದ್ದೇವೆ ಅಂತ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದ್ದಾರೆ.