ಆರ್ಎಸ್ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕ - Dattatreya Hosabale
12:32 March 20
ಆರ್ಎಸ್ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲಾಗಿದ್ದು, ಭಯ್ಯಾಜಿ ಜೋಷಿ ಸ್ಥಾನವನ್ನು ಇವರು ತುಂಬಲಿದ್ದಾರೆ.
ಬೆಂಗಳೂರು:'ಸರಕಾರ್ಯವಾಹ'ರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೇಮಕ ಮಾಡಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಮೂರು ದಿನಗಳ ಆರ್ಎಸ್ಎಸ್ನ ವಾರ್ಷಿಕ ಸಮಾವೇಶವಾದ ಅಖಿಲ್ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಭಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಆರ್ಎಸ್ಎಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಶಿವಮೊಗ್ಗದ ಹೊಸಬಾಳೆ ಅವರು 1968ರಲ್ಲಿ ಆರ್ಎಸ್ಎಸ್ಗೆ ಸೇರ್ಪಡೆಯಾಗಿದ್ದರು. 2009 ರಿಂದ ಆರ್ಎಸ್ಎಸ್ನ 'ಸಹ ಸರಕಾರ್ಯವಾಹ'ರಾಗಿ ಸೇವೆ ಸಲ್ಲಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿಯೂ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು 'ಅಸೀಮಾ' ಎಂಬ ಕನ್ನಡ ಮಾಸಿಕ ಪತ್ರಿಕೆಯ ಸಂಸ್ಥಾಪಕ-ಸಂಪಾದಕರೂ ಆಗಿದ್ದರು.