ಕರ್ನಾಟಕ

karnataka

ETV Bharat / city

ಸ್ಟ್ರಾಂಗ್‌ರೂಂ ನಿರ್ವಹಣೆ ಹೊಣೆ ಹೊತ್ತು ಒಎಂಆರ್‌ ತಿದ್ದುಪಡಿ ಅಕ್ರಮ ಎಸಗಿದ ಆರ್‌ಎಸ್‌ಐ ಬಂಧನ!

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಸ್ಟ್ರಾಂಗ್ ಕೊಠಡಿಯ ಒಎಂಆರ್ ಪ್ರತಿ ತುಂಬಿದ್ದ ಬಾಕ್ಸ್​ಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಲೋಕೇಶಪ್ಪ ಎಂಬುವರನ್ನು ಬಂಧಿಸಲಾಗಿದೆ.

CID
CID

By

Published : May 12, 2022, 6:53 AM IST

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಮತ್ತೊಬ್ಬ ಅಧಿಕಾರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸ್ಟ್ರಾಂಗ್ ಕೊಠಡಿಯಲ್ಲಿದ್ದ ಒಎಂಆರ್ ಪ್ರತಿ ತಿದ್ದುಪಡಿಗೆ ಈ ಅಧಿಕಾರಿಯೇ ಮೂಲ ಕಾರಣ ಎಂದು ಹೇಳಲಾಗಿದೆ. ಮತ್ತೊಂದೆಡೆ, 2017ರಲ್ಲಿ ನಡೆದ ಆರ್​ಎಸ್‌ಐ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನೇಮಕಾತಿ ವಿಭಾಗದ ಸ್ಟ್ರಾಂಗ್ ಕೊಠಡಿಯ ಒಎಂಆರ್ ಪ್ರತಿ ತುಂಬಿದ್ದ ಬಾಕ್ಸ್​ಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಲೋಕೇಶಪ್ಪ ಎಂಬುವರನ್ನು ಬಂಧಿಸಲಾಗಿದೆ. ಉತ್ತರ ಕರ್ನಾಟಕ ಮೂಲದ ಲೋಕೇಶಪ್ಪ ಹತ್ತು ವರ್ಷಗಳ ಕಾಲ ನಾಗರಿಕ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 2017-18ನೇ ಸಾಲಿನಲ್ಲಿ ಆರ್‌ಎಸ್‌ಐ ನೇಮಕಾತಿಯಲ್ಲಿ ಎರಡನೇ ರ‍್ಯಾಂಕ್ ಪಡೆದು ಆಯ್ಕೆಗೊಂಡಿದ್ದು, ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿದ್ದರು. ಬಳಿಕ ಬೆಂಗಳೂರಿನ ಸಿಎಆರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಡಿವೈಎಸ್​ಪಿ ಶಾಂತಕುಮಾರ್ ಸಲಹೆ ಮೇರೆಗೆ ನೇಮಕಾತಿ ವಿಭಾಗಕ್ಕೆ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲೋಕೇಶಪ್ಪನಿಗೆ ಸ್ಟ್ರಾಂಗ್ ಕೊಠಡಿಯ ನಿರ್ವಹಣೆ ಕೊಡಲಾಗಿತ್ತು. ಶಾಂತಕುಮಾರ್ ಕಡೆಯ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಯಾವ ಬಾಕ್ಸ್​ನಲ್ಲಿ ಇಡಲಾಗಿದೆ, ಅವರ ರೋಲ್ ನಂಬರ್ ಏನು? ಎಂಬುದು ಲೋಕೇಶಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ, ಸ್ಟ್ರಾಂಗ್ ರೂಮ್‌ನಲ್ಲಿ ಕೆಲ ಅಭ್ಯರ್ಥಿಗಳು, ಕೋಚಿಂಗ್ ಸೆಂಟರ್‌ನ ಶಿಕ್ಷಕರು ಹಾಗೂ ಮಧ್ಯವರ್ತಿಗಳ ಮೂಲಕ ಒಎಂಆರ್ ಶೀಟ್‌ಗಳ ತಿದ್ದುಪಡಿ ಮಾಡಿಸುತ್ತಿದ್ದರು. ಶಾಂತಕುಮಾರ್ ಸೂಚನೆ ಮೇರೆಗೆ ಲೋಕೇಶಪ್ಪ ಈ ಅವ್ಯವಹಾರ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿವೈಎಸ್​ಪಿ ಶಾಂತಕುಮಾರ್ ಸಶಸ್ತ್ರ ಮೀಸಲು ಪಡೆಯಿಂದ ಬಂದಿದ್ದರಿಂದ ನೇಮಕಾತಿ ವಿಭಾಗದಲ್ಲಿ ತನ್ನ ಕೆಳಗಿರುವ ಅಧಿಕಾರಿ-ಸಿಬ್ಬಂದಿಯನ್ನು ಅದೇ ವಿಭಾಗದಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಆರ್‌ಎಸ್‌ಐ ಲೋಕೇಶಪ್ಪ, ಶ್ರೀನಿವಾಸ್ ಹಾಗೂ ಹೆಡ್ ಕಾನ್ಸ್​ಟೇಬಲ್ ಲೋಕೇಶ್ ಅವರನ್ನು ನೇಮಿಸಿಕೊಂಡಿದ್ದಾರೆ. ಅದರಲ್ಲೂ, ಲೋಕೇಶಪ್ಪನ ಮೇಲೆ ಶಾಂತಕುಮಾರ್‌ಗೆ ಅಪಾರ ನಂಬಿಕೆ. ಹೀಗಾಗಿ ಸ್ಟ್ರಾಂಗ್ ಕೊಠಡಿಯ ಭದ್ರತೆ, ನಿರ್ವಹಣೆಗೆ ಲೋಕೇಶಪ್ಪನಿಗೆ ನೀಡಲಾಗಿತ್ತು ಎಂದು ಮೂಲಗಳಿಂದು ತಿಳಿದುಬಂದಿದೆ.

ಮಂಗಳವಾರ ಬಂಧನಕ್ಕೊಳಗಾದ ಎಫ್‌ಡಿಎ ಹರ್ಷ, ಆರ್‌ಎಸ್‌ಐ ಶ್ರೀನಿವಾಸ್, ಹೆಡ್‌ ಕಾನ್ಸ್​ಟೇಬಲ್ ಲೋಕೇಶ್ ಮತ್ತು ಶ್ರೀಧರ್ ಜೊತೆಗೆ ಲೋಕೇಶಪ್ಪನ ಬಂಧನಕ್ಕೆ ಖೆಡ್ಡಾ ತೋಡಲಾಗಿತ್ತು. ಆದರೆ, ಶ್ರೀನಿವಾಸ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಲೋಕೇಶಪ್ಪ ಪರಾರಿಯಾಗಲು ಯತ್ನಿಸಿದ್ದ. ಆದರೂ ಸಿಐಡಿ ಪೊಲೀಸರು ತಡರಾತ್ರಿವರೆಗೂ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಇಬ್ಬರು ಮಧ್ಯವರ್ತಿಗಳು ಸೇರಿ ಆರು ಮಂದಿ ಬಂಧಿಸಿದ ಸಿಐಡಿ

ABOUT THE AUTHOR

...view details