ಬೆಂಗಳೂರು: ನಿರ್ಮಾಣ ಹಂತದ ಮನೆಯ ಟೆರೆಸ್ ಮೇಲೆ ಕುಳಿತಿದ್ದ ರೌಡಿಯೊಂದಿಗೆ ಜಗಳವಾಡಿದ ಆರೋಪಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಪ್ರಕರಣ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಸಂಬಂಧ ಮೂವರು ಆರೋಪಿಗಳಾದ ಅಪ್ಪು, ಧನುಷ್, ವಿಜಯ್ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ನಾಗಮ್ಮನಗರದ ರೌಡಿ ಸಂತೋಷ್ (28) ಎಂಬಾತನ ಕೊಲೆಯಾದವ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ.
ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದರು. ಆರೋಪಿಗಳು ಮತ್ತು ಸಂತೋಷ್ ನಡುವೆ ಗಲಾಟೆ ನಡೆದು ಹೊಡೆದಾಟವಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಆಗಾಗ್ಗೆ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹೋಗುತ್ತಿದ್ದರು. ಶನಿವಾರ ನ್ಯಾಯಾಲಯಕ್ಕೆ ಹೋಗಿದ್ದಾಗ ರಾಜಿ ಮಾಡಿಕೊಳ್ಳಬೇಕೆಂದು ಸಂತೋಷ್ ಹೇಳಿದಾಗ ಆರೋಪಿಗಳು ಒಪ್ಪಿಲ್ಲ ಮತ್ತು ಆ ವಿಚಾರವಾಗಿ ನಿನ್ನೆ ಮತ್ತೆ ಇವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕೆ.ಪಿ.ಅಗ್ರಹಾರದ ನಾಗಮ್ಮನಗರದ 5ನೇ ಕ್ರಾಸ್‌ನಲ್ಲಿ ಸಂತೋಷ್ ಮನೆ ಕಟ್ಟಿಸುತ್ತಿದ್ದು, ರಾತ್ರಿ ನಿರ್ಮಾಣ ಹಂತದ ತನ್ನ ಮನೆಯ ಟೆರೆಸ್ ಮೇಲೆ ಕುಳಿತಿದ್ದನು. ಆ ವೇಳೆ ಆರೋಪಿಗಳು ಅಲ್ಲಿಗೆ ಹೋಗಿದ್ದು, ಆಗ ಜಗಳವಾಗಿದೆ. ಈ ಸಮಯದಲ್ಲಿ ಸಂತೋಷ್ ಬಳಿಯಿದ್ದ ಚಾಕುವನ್ನು ಆರೋಪಿಗಳು ಕಿತ್ತುಕೊಂಡು ತಲೆ, ಮುಖ ಸೇರಿ ದೇಹದ ಹಲವು ಕಡೆ ಚುಚ್ಚಿ ಪರಾರಿಯಾಗಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್‌ನನ್ನು ತಕ್ಷಣ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಂತೋಷ್ ಮೃತಪಟ್ಟಿದ್ದಾನೆ. ಕೆ.ಪಿ.ಅಗ್ರಹಾರ ಠಾಣೆ ಪೊಲೀಸ್ ಸಿಬ್ಬಂದಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಕೈಗೊಂಡು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಪರಾರಿಯಾಗಿರುವ ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ವಿಡಿಯೋ ವೈರಲ್ ಮಾಡಿದ ದುರುಳರು