ಬೆಂಗಳೂರು:ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ಸಿಗದ ಹಿನ್ನೆಲೆ ಬೇಸರಗೊಂಡಿದ್ದ ರೋಷನ್ ಬೇಗ್ ಅವರನ್ನು ಸಮಾಧಾನಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾಜಿ ನಗರ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ಗೆ ಟಿಕೆಟ್ ನೀಡದೆ ಪಕ್ಷ ನಿರಾಸೆಗೊಳಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ರಿಜ್ವಾನ್ ಅರ್ಷದ್ಗೆ ಈ ಸಾರಿ ಕೂಡ ಇನ್ನೊಂದು ಅವಕಾಶವನ್ನು ನೀಡಲಾಗಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ರೋಷನ್ ಬೇಗ್ಗೆ ಇದು ಸಹಜವಾಗಿ ಬೇಸರ ತರಿಸಿತ್ತು. ಚುನಾವಣಾ ಚಟುವಟಿಕೆಯಿಂದ ದೂರ ಉಳಿಯಲು ಅವರು ತೀರ್ಮಾನಿಸಿದ್ದರು. ಆದರೆ ಕಡೆಗೂ ಅವರ ಮನವೊಲಿಸುವಲ್ಲಿ ಪಕ್ಷ ಸಫಲವಾಗಿದ್ದು, ನಿನ್ನೆಯಿಂದ ಪಕ್ಷದ ಅಭ್ಯರ್ಥಿ ಪರ ರೋಷನ್ ಬೇಗ್ ಪ್ರಚಾರಕ್ಕೆ ಇಳಿದಿದ್ದಾರೆ.
ಕೊನೆಗೂ ತಣ್ಣಗಾದ ಮಾಜಿ ಸಚಿವ ರೋಷನ್ 'ಬೇಗು'ದಿ ಮೊದಲು ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ರೋಷನ್ ಬೇಗ್, ಹಿರಿಯರನ್ನು ಪಕ್ಷ ಸರಿಯಾಗಿ ಬಳಸಿಕೊಳ್ತಿಲ್ಲ ಅಂತ ಅಸಮಾಧಾನಗೊಂಡಿದ್ದರು. ಎಲ್ಲ ವಿಚಾರಗಳಲ್ಲೂ ತಮ್ಮ ಹಿರಿತನಕ್ಕೆ, ಸಮುದಾಯಕ್ಕೆ ಬೆಲೆ ನೀಡ್ತಿಲ್ಲ ಅಂತ ಬೇಸರಗೊಂಡಿದ್ದ ರೋಷನ್ ಬೇಗ್, ಕೊನೆಗೂ ಸೆಂಟ್ರಲ್ ಕ್ಯಾಂಡಿಡೇಟ್ ರಿಜ್ವಾನ್ ಅರ್ಷದ್ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ಪ್ರತ್ಯೇಕ ಮಾತುಕತೆ
ರೋಷನ್ ಬೇಗ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಮನವೊಲಿಸಿದ ರಿಜ್ವಾನ್ ಅರ್ಷದ್ ಪ್ರಚಾರಕ್ಕೆ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ ಒಗ್ಗಟ್ಟಿಗಾಗಿ ರಿಜ್ವಾನ್ ಪರ ನಿಂತ ರೋಷನ್ ಬೇಗ್ ಮುಂದಿನ ದಿನಗಳಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ನಿನ್ನೆಯಿಂದ ಅಧಿಕೃತವಾಗಿ ರಿಜ್ವಾನ್ ಪರ ರೋಷನ್ ಬೇಗ್ ಪ್ರಚಾರ, ಸಭೆ ಆರಂಭಿಸಿದ್ದಾರೆ.
ತಮ್ಮ ಪ್ರಾಬಲ್ಯವಿರುವ ಎಲ್ಲಾ ಭಾಗಗಳಲ್ಲಿ ಪ್ರಚಾರ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಕೆಲ ದಿನಗಳ ಹಿಂದೆ ಇದೇ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರಹಾಕಿದ್ದ ರೋಷನ್ ಬೇಗ್ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದಲ್ಲಿ ಆತಂಕ ಮೂಡಿಸಿದ್ದರು. ಕೊನೆಗೂ ತಣ್ಣಗಾದ ರೋಷನ್ ಬೇಗ್ ಬೇಗುದಿ ಪ್ರಚಾರದ ಅಂಗಳಕ್ಕೆ ಬರುವಂತೆ ಮಾಡಿದೆ.