ಬೆಂಗಳೂರು : 'ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ. ನಾವು ಈಗಾಗಲೇ 8 ಕೊಲೆ ಮಾಡಿದ್ದೇವೆ. ಪೊಲೀಸರಿಗೆ ವಿಷಯ ತಿಳಿಸಿದರೆ 9ನೇ ಕೊಲೆ ನೀನೇ ಆಗುವೆ' ಎಂದು ಸಿನಿಮೀಯ ಶೈಲಿಯಲ್ಲಿ ಮನೆಯ ಒಡತಿಯನ್ನು ಬೆದರಿಸಿ, ಕಳ್ಳತನ (Theft) ಮಾಡಿದ ಖದೀಮನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಬಂಧಿತ ಆರೋಪಿ. ದೊಡ್ಡಜಾಲ ನಿವಾಸಿ ಗೀತಾ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯದಲ್ಲಿ ಮತ್ತೋರ್ವ ಭಾಗಿಯಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನೆಲೆ :ನ. 6ರಂದು ರಾತ್ರಿ ದೊಡ್ಡಜಾಲದ ನಿವಾಸಿ ಗೀತಾ ಎಂಬುವರ ಮನೆಗೆ ನುಗ್ಗಿದ್ದ ಆರೋಪಿಗಳು, ಮನೆಗೆ ನುಗ್ಗುವ ಮುನ್ನ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಬಾಗಿಲು ತೆರೆದಾಕ್ಷಣ ಮಹಿಳೆಯನ್ನು ಹಿಡಿದುಕೊಂಡು ಬಾಯಿಗೆ ಬಟ್ಟೆ ತುರುಕಿ ಕೈ, ಕಾಲುಗಳಿಗೆ ಬಟ್ಟೆಯಿಂದ ಕಟ್ಟಿದ್ದಾರೆ.
ಬಳಿಕ ಬೆಡ್ ರೂಂಗೆ ತೆರಳಿ ಕಬೋರ್ಡ್ನಲ್ಲಿದ 6 ಲಕ್ಷ ರೂ. ಬೆಲೆ ಬಾಳುವ 161 ಗ್ರಾಂ ಚಿನ್ನಾಭರಣ ಹಾಗೂ ₹10 ಸಾವಿರ ನಗದು ದೋಚಿದ್ದಾರೆ. ಅಲ್ಲದೇ ಮನೆಯಿಂದ ಹೊರ ಹೋಗುವಾಗ ಮಹಿಳೆಯನ್ನು ಬೆದರಿಸಿ ಕಾಲ್ಕಿತ್ತಿದ್ದರು.
ಮಹಿಳೆಯ ಕೈಕಾಲು ಕಟ್ಟಿ ದರೋಡೆ ಈ ಸಂಬಂಧ ಗೀತಾ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ (case) ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಂ.ಪ್ರವೀಣ್ (Inspector M. Praveen) ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ. ಆರೋಪಿ ನೀಲಿ ಬಣ್ಣದ ಶರ್ಟ್ ಧರಿಸಿರಿರುವುದಾಗಿ ಮಹಿಳೆ ನೀಡಿದ ಸುಳಿವಿನ ಮೇರೆಗೆ ಅಂದು ರಾತ್ರಿ (ನ.6) ಏರಿಯಾ ಹೊಯ್ಸಳ ಹಾಗೂ ಗಸ್ತು ಪೊಲೀಸರಿಗೆ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಈ ವೇಳೆ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಆರೋಪಿ ಪೊಲೀಸ್ ವಾಹನ ಕಂಡ ಕೂಡಲೇ ಓಡಿ ಹೋಗಲು ಮುಂದಾಗಿದ್ದಾನೆ. ಕೂಡಲೇ ಆತನನ್ನು ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈತನ ವಿರುದ್ಧ ಯಾವ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಮನೆ ಮಾಲಕಿ ಗೀತಾಳನ್ನು ಹೆದರಿಸಲು 8 ಕೊಲೆ ಮಾಡಿರುವೆ ಎಂದು ಸುಳ್ಳು ಹೇಳಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ಎಂ.ಪ್ರವೀಣ್ ಇದನ್ನೂ ಓದಿ:ಚಿಂತಾಮಣಿಯಲ್ಲಿ ದೇವಸ್ಥಾನದ ಪೂಜಾರಿ, ಶಿಷ್ಯ ಆತ್ಮಹತ್ಯೆ?.. ಸಾವಿನ ಸುತ್ತ ಅನುಮಾನದ ಹುತ್ತ