ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ 11,092 ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಇದರಲ್ಲಿ 5,119 ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ದೂರು ದಾಖಲಾದ ಒಂದು ವಾರದೊಳಗೆ ರಸ್ತೆಗುಂಡಿ ಮುಚ್ಚಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ಹೇಳಿದರು.
ಮಂಗಳವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ಮುಂಗಾರು ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಜೂನ್‌ನಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.