ಬೆಂಗಳೂರು :ನಗರದಿಂದ ಬೆಂಗಳೂರು ಏರ್ಪೋರ್ಟ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಇತ್ತೀಚಿನ ದಿನಗಳಲ್ಲಿ ಅಪಘಾತದ ಕೂಪವಾಗಿ ಪರಿಣಮಿಸುತ್ತಿದೆ. ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆಯಲ್ಲಿ ಮಿತಿ ಮೀರಿದ ವೇಗದ ಚಾಲನೆಯಿಂದ ದಿನೇದಿನೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳದಿಂದ ಯಲಹಂಕ, ಕೊಗೀಲು, ಚಿಕ್ಕಜಾಲಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದ್ದು, ಈ ಹೈವೇಯಲ್ಲಿ ಕಳೆದ ಜನವರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 15 ಜನರು ಮೃತಪಟ್ಟರೆ 64 ಜನರು ಗಾಯಗೊಂಡಿದ್ದಾರೆ.
ಅದೇ ರೀತಿ 2021ರಲ್ಲಿ 210 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳಲ್ಲಿ 305 ಮಂದಿ ಗಾಯಗೊಂಡರೆ, ಹೆಬ್ಬಾಳ ಮತ್ತು ಕೆಐಎ ನಡುವೆ ಸಂಭವಿಸಿದ 54 ಅಪಘಾತಗಳಲ್ಲಿ 59 ಜನರು ಸಾವನ್ನಪ್ಪಿದ್ದಾರೆ.
2020ರಲ್ಲಿ 55 ಅಪಘಾತಗಳಲ್ಲಿ 62 ಜನರು ಸಾವನ್ನಪ್ಪಿದ್ದಾರೆ. 181 ಮಾರಣಾಂತಿಕವಲ್ಲದ ಅಪಘಾತಗಳಲ್ಲಿ 226 ಮಂದಿ ಗಾಯಗೊಂಡಿದ್ದಾರೆ. 2019 ರಲ್ಲಿ 77 ಮತ್ತು 2018 ರಲ್ಲಿ 84 ಜನರನ್ನು ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಹೈವೇಯಲ್ಲಿ ಹೆಚ್ಚಾಗುತ್ತಿರುವ ರಸ್ತೆ ಅಪಘಾತ ಪ್ರಕರಣ ತಗ್ಗಿಸಲು ಹಾಗೂ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನಗರ ಸಂಚಾರ ವಿಭಾಗದ ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎ) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.