ಬೆಂಗಳೂರು: ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಿನ್ನೆ ರಾತ್ರಿ ಗಳಗಳನೇ ಅತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಪ್ರಚಾರಕ್ಕೆ ಬರದೇ ಕೈಕೊಟ್ಟ ಕಾರಣದಿಂದ ಕಂಗೆಟ್ಟಿರುವ ರಿಜ್ವಾನ್ ಅರ್ಷದ್ಗೆ ಈ ಇನ್ನೊಂದು ಆಘಾತ ಉಂಟಾಗಿದೆ. ಸಂಪಂಗಿ ರಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಸಂಪತ್ಕುಮಾರ್ ಕಾಂಗ್ರೆಸ್ ಬಿಟ್ಟು ಮಂಗಳವಾರ ಬಿಜೆಪಿ ಸೇರಿದ್ದಾರೆ. ನಿನ್ನೆ ಮೊನ್ನೆಯವರೆಗೂ ರಿಜ್ವಾನ್ ಜತೆಯಲ್ಲೇ ಇದ್ದು, ಚುನಾವಣೆ ಪ್ರಚಾರಕ್ಕೆ ಅಗತ್ಯಬೀಳುತ್ತದೆ ಎಂದು ಸಾಕಷ್ಟು ಹಣವನ್ನೂ ಪಡೆದು ಸಂಪತ್ಕುಮಾರ್ ಕೈಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಸೇರಿದ ಬಿಬಿಎಂಪಿ ಸದಸ್ಯ ಸಂಪತ್ಕುಮಾರ್ ಆಪ್ತನಂತೆ ಜತೆಯಲ್ಲಿದ್ದು, ಕೈಕೊಟ್ಟಿದ್ದರಿಂದ ಆಘಾತಕ್ಕೊಳಗಾಗಿರುವ ರಿಜ್ವಾನ್ ತಮ್ಮ ಆಪ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ಗಳಗಳನೇ ಅತ್ತಿದ್ದಾರೆ ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ ಎಂದು ಸಂಪತ್ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಉಪಚುನಾವಣೆ ಮತದಾನಕ್ಕೆ ಎರಡು ದಿನ ಮುನ್ನ ಈ ರೀತಿ ಆಪ್ತನಂತೆ ಗುರುತಿಸಿಕೊಂಡಿದ್ದ ಕಾರ್ಪೊರೇಟರ್ ಕೈಕೊಟ್ಟಿದ್ದು ರಿಜ್ವಾನ್ಗೆ ಗರ ಬಡಿದಂತಾಗಿದೆ.
ಕಡೆಯ ಕ್ಷಣದಲ್ಲಿ ನಂಬಿದವರು ಕೈಕೊಟ್ಟಿರುವುದು ರಿಜ್ವಾನ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ ಇದು ಈಗ ಕಣ್ಣೀರಿನ ರೂಪದಲ್ಲಿ ಆಚೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.