ಕಾರವಾರ: ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆ ನೀಡಿರುವುದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ಬಾಂಬ್ ಇಡುವಂತಹ ಕೃತ್ಯ ಯಾರೇ ಮಾಡಿದರೂ ಭಯೋತ್ಪಾದಕ ಕೃತ್ಯ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಕುಮಟಾದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಪೊಲೀಸರ ಅಣಕು ಪ್ರದರ್ಶನ ಎಂದು ಹೇಳಿಕೆ ನೀಡಿದ್ದಾರೆ. ಅದು ಅವರಿಗೆ ಕುಮಾರಸ್ವಾಮಿಗೆ ಶೋಭೆ ತರುವಂತದಲ್ಲ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಇದೀಗ ಪೊಲೀಸರ ಮೇಲೆ ಗೂಬೆ ಕೂರಿಸುವುದು ಅಕ್ಷಮ್ಯ ಎಂದು ಕಿಡಿಕಾರಿದರು.
ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಕಂದಾಯ ಸಚಿವ ಆರ್ ಅಶೋಕ್ ಕಿಡಿ.. ಇಂತಹ ಹೇಳಿಕೆಗಳಿಂದ ಮುಂದೊಂದು ದಿನ ಜನಜೆಡಿಎಸ್‌ನಅಣಕು ಪಕ್ಷ ಎಂದು ತೀರ್ಮಾನಿಸುತ್ತಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಲಘುವಾಗಿ ಹೇಳಿಕೆಗಳನ್ನು ನೀಡುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಾಂಗ್ಲಾ ವಲಸಿಗರ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಆರ್.ಅಶೋಕ್, ಬಾಂಗ್ಲಾ ವಲಸಿಗರು 30 ವರ್ಷಗಳಿಂದ ದೇಶದೊಳಗೆ ಬರುತ್ತಿರುವುದು ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ಗಾಗಿ ವಲಸಿಗರಿಗೆ ಶೆಡ್ ನಿರ್ಮಿಸಿಕೊಟ್ಟು, ರೇಷನ್ ಕಾರ್ಡ್ ನೀಡಿದೆ. ಬೇರೆ ದೇಶಗಳಿಂದ ಬಂದು ಪೌರತ್ವ ಪಡೆದಿಲ್ಲವೋ ಅವರು ವಾಪಸ್ ಹೋಗಬೇಕು. ಭಾರತ ಧರ್ಮಛತ್ರ ಅಲ್ಲ. ಸಿದ್ದರಾಮಯ್ಯ ಭಾರತವನ್ನು ಬಾಂಗ್ಲಾ, ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಭಾರತವಾಗಿಯೇ ಉಳಿಯಲು ಇಂತಹ ವಲಸಿಗರಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.