ಬೆಂಗಳೂರು :ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಪಕ್ಷ ಹಾಗೂ ಸರ್ಕಾರದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕ್ರಮಕೈಗೊಳ್ಳುವ ನಿರ್ಧಾರವನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕೋರ್ ಕಮಿಟಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ, ಯಡಿಯೂರಪ್ಪ ಅವರೇ ನಮ್ಮ ನಾಯಕ.
ಅದರಲ್ಲಿ ಯಾವ ಬದಲಾವಣೆ ಇಲ್ಲವೇ ಇಲ್ಲ. ನಮ್ಮ ಉಸ್ತುವಾರಿ ಅರುಣ್ ಸಿಂಗ್ ಈ ಸಂದೇಶವನ್ನು ಮಾಧ್ಯಮಗಳಿಗೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಾನು ಹೇಳಿದರೂ ಯಾಕೆ ಪದೇಪದೆ 15 ದಿನಕ್ಕೊಮ್ಮೆ ನಾಯಕತ್ವದ ಬದಲಾವಣೆ ಕೂಗು ಬರುತ್ತಿದೆ ಎಂದು ಅರುಣ್ ಸಿಂಗ್ ಪ್ರಶ್ನಿಸಿದ್ದು, ಇನ್ಮುಂದೆ ಇಂತಹದ್ದಕ್ಕೆಲ್ಲ ಅವಕಾಶ ನೀಡದಂತೆ ಸೂಚಿಸಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ಇಲ್ಲ, ದನಿ ಎತ್ತಿದವರ ವಿರುದ್ಧ ಕ್ರಮ ; ಬಿಜೆಪಿ ಕೋರ್ ಕಮಿಟಿಯಲ್ಲಿ ನಿರ್ಧಾರ! ನಾಯಕತ್ವ ಬದಲಾವಣೆ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಖಚಿತ
ನಾಯಕತ್ವ ಬದಲಾವಣೆ ಹೇಳಿಕೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ. ಕೆಲವೇ ದಿನದಲ್ಲಿ ಕಠಿಣ ಕ್ರಮಕೈಗೊಳ್ಳುವ ತೀರ್ಮಾನ ಆಗಿದೆ. ಯಾರು ಪಕ್ಷ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ದೂರವಾಣಿ ಕದ್ದಾಲಿಕೆ ಕುರಿತು ಶಾಸಕ ಅರವಿಂದ ಬೆಲ್ಲದ್ ಆರೋಪವನ್ನು ಪಕ್ಷ ಪರಿಶೀಲನೆ ಮಾಡಲಿದೆ. ಇನ್ಮುಂದೆ ಯಾರಾದರೂ ಪಕ್ಷ, ಸರ್ಕಾರದ ವಿರುದ್ಧ ಮಾತನಾಡಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಸಿದರು. ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ಪುನಾರಚನೆ ಕುರಿತ ಯಾವುದೇ ಚರ್ಚೆ ಆಗಿಲ್ಲ. ಅದು ಸಿಎಂ ಯಡಿಯೂರಪ್ಪ ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದಾಗಿದೆ ಎಂದು ತಿಳಿಸಿದರು.
ಕೋರ್ ಕಮಿಟಿ ನಿರ್ಧಾರ
ಕೋರ್ ಕಮಿಟಿ ಸಭೆಯಲ್ಲಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಜಾಸ್ತಿ ಮಾಡಬೇಕು, ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು. ತುರ್ತು ಪರಿಸ್ಥಿತಿಯ ಕರಾಳ ಕಾನೂನು ತರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಜೂನ್ 25ರಂದು ಎಲ್ಲ ತಾಲೂಕಿನಲ್ಲಿ ಕರಾಳ ದಿನಾಚರಣೆಗೆ ನಿರ್ಧಾರ ಮಾಡಲಾಯಿತು. ಅಂದು ವಿಡಿಯೋ ಸಂವಾದದ ಮೂಲಕ, ತುರ್ತುಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಕೊರೊನಾ ನಿಯಮ ಪಾಲಿಸಿ ಪ್ರತಿ ತಾಲೂಕಿನಲ್ಲಿ ಯೋಗ ದಿನಾಚರಣೆ ಮಾಡಬೇಕು. ಜೂನ್ 23 ಶಾಮ್ ಪ್ರಕಾಶ್ ಮುಖರ್ಜಿ ಜನ್ಮದಿನದಂದು ಬೂತ್ ಮಟ್ಟದ ಕಾರ್ಯಕ್ರಮ. ಅವರ ಚಿಂತನೆ, ಜೀವನ ಸ್ಫೂರ್ತಿ ಬಗ್ಗೆ ವಿಚಾರ ಸಂಕಿರಣ ಆಯೋಜನೆ ಮಾಡಬೇಕು ಮತ್ತು ಜುಲೈ 6ರವರೆಗೆ ಮುಖರ್ಜಿ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿದೆ ಎಂದರು.
ಕೊರೊನಾದಿಂದ ಸ್ಥಗಿತವಾಗಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಜೂನ್ 26ರಂದು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಜುಲೈ 1-15 ಜಿಲ್ಲಾ ಕಾರ್ಯಕಾರಣಿ, 15 ರಿಂದ 30ರವರೆಗೆ ಮಂಡಲ ಕಾರ್ಯಕಾರಿಣಿಗೆ ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದರು. ಅನಾಥ ಮಕ್ಕಳಿಗೆ ಕೇಂದ್ರ 10 ಲಕ್ಷ ರೂ. ನೆರವು, 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವುದು, ರಾಜ್ಯದಿಂದಲೂ ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ₹1 ಲಕ್ಷ ನೀಡಿವುದಕ್ಕೆ ಪಕ್ಷ ಅಭಿನಂದನೆ ಸಲ್ಲಿಸಿದೆ.
ಜಿಲ್ಲಾ, ತಾಲೂಕು ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ಮಾಡಲು ಜಿಲ್ಲಾ ಘಟಕಕ್ಕೆ ಸೂಚನೆ ಕೊಡಲು ನಿರ್ಧರಿಸಲಾಯಿತು. ಕೋವಿಡ್‌ನಿಂದ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು ಎಂದು ಹೇಳಿದರು.